ರಾಜಕಾರಣಿಗಳನ್ನು ಆಗಾಗ್ಗೆ ಟೀಕಿಸಿ ವಿವಾದಕ್ಕೆ ಗುರಿಯಾಗುತ್ತಲೇ ಇರುತ್ತಾರೆ ಸೂಪರ್ ಸ್ಟಾರ್ ರಜನಿಕಾಂತ್ (Rajinikanth). ಈ ಬಾರಿ ಡಿಎಂಕೆ ಮುಖಂಡ ದೊರೆಐ ಮುರುಗನ್ (Dorai Murugan) ಅವರ ಬಗ್ಗೆ ಮಾತನಾಡಿ, ವಿವಾದವನ್ನು (Controversy) ಮೈಮೇಲೆ ಎಳೆದುಕೊಂಡಿದ್ದಾರೆ. ಜೊತೆಗೆ ದೊರೆ ಜೊತೆಗಿನ ಸ್ನೇಹದ ಬಗ್ಗೆಯೂ ಮಾತಾಡಿ ತಿಪ್ಪೆ ಸಾರಿಸುವಂಥ ಕೆಲಸ ಮಾಡಿದ್ದಾರೆ.
ಪುಸ್ತಕ ಬಿಡುಗಡೆಯೊಂದರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಜನಿಕಾಂತ್, ಅದೇ ವೇದಿಕೆಯ ಮೇಲಿದ್ದ ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರನ್ನು ಹೊಗಳಿದ್ದರು. ತಂದೆ ಕರುಣಾನಿಧಿ ನಿಧನದ ನಂತರ ಪಕ್ಷವನ್ನು ಅದ್ಭುತವಾಗಿ ಮುನ್ನೆಡೆಸಿಕೊಂಡು ಹೋಗುತ್ತಿದ್ದಾರೆ. ತಮಿಳುನಾಡಿನ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಕೆಲವರನ್ನು ನಿಭಾಯಿಸೋದರಲ್ಲಿ ಹೈರಾಣಾಗಿದ್ದಾರೆ ಎಂದು ಮಾತನಾಡುತ್ತಾ ದೊರೈ ಮುರುಗನ್ ಅವರನ್ನ ಎಳೆತಂದಿದ್ದಾರೆ ರಜನಿ.
ಕರುಣಾನಿಧಿ ಅವರ ಕಣ್ಣಲ್ಲೇ ಬೆರಳಾಡಿಸಿದೋರು ದೊರೈ ಮುರುಗನ್. ಇಂಥವರು ಡಿಎಂಕೆ ಪಕ್ಷದಲ್ಲಿದ್ದಾರೆ. ಹಿರಿಯರಾಗಿದ್ದಾರೆ. ಅವರನ್ನು ನಿಭಾಯಿಸೋದು ಕಷ್ಟ. ಹಿರಿಯರ ಕಾರಣದಿಂದಾಗಿ ಹೊಸಬರು ರಾಜಕಾರಣಕ್ಕೆ ಬರೋಕೆ ಆಗುತ್ತಿಲ್ಲ ಎಂದು ದೊರೈಯನ್ನು ಟೀಕಿಸಿದ್ದಾರೆ. ರಜನಿಯ ಈ ಮಾತಿಗೆ ದೊರೈ ಮುರುಗನ್ ಕೂಡ ಎದುರೇಟು ಕೊಟ್ಟಿದ್ದಾರೆ.
ರಜನಿಕಾಂತ್ ಗೆ ಹಲ್ಲು ಉದುರಿವೆ. ತಲೆ ಬೆಳ್ಳಗಾಗಿದೆ. ವಯಸ್ಸೂ ಆಗಿದೆ. ಆದರೂ, ಇನ್ನೂ ನಟಿಸ್ತಾ ಇದ್ದಾರೆ. ಇವರು ನಟಿಸೋದನ್ನ ನಿಲ್ಲಿಸಿದರೆ ಹೊಸಬರಿಗೆ ಅವಕಾಶ ಸಿಗಲಿದೆ. ಇವರಿಂದಾಗಿ ಹೊಸ ಕಲಾವಿದರಿಗೆ ಅವಕಾಶ ಸಿಗುತ್ತಿಲ್ಲ ಎಂದಿದ್ದಾರೆ. ದೊರೈ ಮಾತಿಗೆ ರಜನಿ ಪ್ರತ್ಯುತ್ತರ ನೀಡಿ ದೊರೈ ನನ್ನ ಬಹುಕಾಲದ ಸ್ನೇಹಿತರು. ಅವರು ಏನೇ ಅಂದರೂ, ನನಗೆ ಬೇಸರವಾಗಲ್ಲ ಅಂದಿದ್ದಾರೆ.