ನವದೆಹಲಿ: ಅವಧಿಗೂ ಮುನ್ನ ಜನಿಸಿದ ಅವಳಿ ಮಕ್ಕಳು ಮೃತಪಟ್ಟಿವೆ ಎಂದು ಹೇಳಿ ಆಸ್ಪತ್ರೆ ಸಿಬ್ಬಂದಿ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಹಾಕಿ ನೀಡಿದ್ದು, ಅಂತ್ಯಸಂಸ್ಕಾರದ ವೇಳೆ ಒಂದು ಮಗು ಬದುಕಿರುವುದು ಪತ್ತೆಯಾದ ಘಟನೆ ದೆಹಲಿಯಲ್ಲಿ ನಡೆದಿದೆ.
ಶಾಲಿಮಾರ್ ಭಾಗ್‍ನ ಮ್ಯಾಕ್ಸ್ ಆಸ್ಪತ್ರೆ ಯಲ್ಲಿ ಜನಿಸಿದ ಅವಳಿ ಹೆಣ್ಣು, ಗಂಡು ಮಕ್ಕಳು ಮೃತಪಟ್ಟಿವೆ ಎಂದು ವೈದ್ಯರು ಹೇಳಿದ್ದರು. ಆದರೆ ಮಕ್ಕಳ ಅಂತ್ಯಸಂಸ್ಕಾರ ವೇಳೆ ಒಂದು ಮಗು ಉಸಿರಾಡುತ್ತಿರುವುದನ್ನು ಕಂಡ ಪೋಷಕರು ಮಗುವನ್ನು ಆಸ್ಪತ್ರೆ ದಾಖಲಿಸಿದ್ದಾರೆ.
Advertisement
Advertisement
ದೆಹಲಿ ಮೂಲದ ಆಶಿಶ್, 6 ತಿಂಗಳ ಗರ್ಭಿಣಿ ಪತ್ನಿ ವರ್ಷಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದ ಕಾರಣ ನವೆಂಬರ್ 28 ರಂದು ಆಸ್ಪತ್ರೆಗೆ ದಾಖಲಿಸಿದ್ದರು. ವರ್ಷ ಅವರ ಪರಿಸ್ಥಿತಿ ಗಂಭೀರವಾಗಿದ್ದು, ಮಕ್ಕಳ ಜೀವ ಉಳಿಯುವುದು ಕಷ್ಟಸಾಧ್ಯ ಎಂದು ವೈದ್ಯರು ಹೇಳಿದ್ದರು. ನವೆಂಬರ್ 30 ರ ಬೆಳಗ್ಗೆ ವರ್ಷ ಅವರಿಗೆ ಹೆರಿಗೆ ಆಗಿದೆ ಎಂದು ತಿಳಿಸಿದ ವೈದ್ಯರು ಅವಧಿ ಪೂರ್ವ ಹೆರಿಗೆ ಆಗಿರುವುದರಿಂದ ಮಕ್ಕಳು ಮೃತಪಟ್ಟಿವೆ ಎಂದು ತಿಳಿಸಿದ್ದರು.
Advertisement
ಆದರೆ ಶವಸಂಸ್ಕಾರಕ್ಕೆ ತೆಗೆದುಕೊಂಡು ಹೋದ ವೇಳೆ ಒಂದು ಮಗುವಿನಲ್ಲಿ ಚಲನೆ ಕಂಡುಬಂದಿದೆ. ಆಗ ಪ್ಯಾಕೆಟ್ ಹರಿದು ನೋಡಿದಾಗ ಅವಳಿ ಮಕ್ಕಳಲ್ಲಿ ಒಂದು ಮಗು ಬದುಕಿರುವುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಆಸ್ಪತ್ರೆಯ ವೈದ್ಯರ ವಿರುದ್ಧ ಪ್ರಸ್ತುತ ಐಪಿಸಿ ಸೆಕ್ಷನ್ 308 ರ ಪ್ರಕಾರ ದೂರು ದಾಖಲಿಸಲಾಗಿದೆ. ವೈದ್ಯರ ವಿರುದ್ಧ ಆರೋಪ ನಿಜವಾದಲ್ಲಿ 7 ವರ್ಷಗಳ ಶಿಕ್ಷೆಯಾಗುವ ಸಾಧ್ಯತೆಯಿದೆ.
Advertisement
ಈ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಪ್ರಕರಣದ ಕುರಿತು ಕ್ರಿಮಿನಲ್ ಕೇಸ್ ಅಡಿ ತನಿಖೆಗೆ ಆದೇಶ ನೀಡಿದ್ದಾರೆ. ಘಟನೆ ಕುರಿತು ವಿವರಣೆ ನೀಡಿರುವ ಮಗುವಿನ ತಂದೆ, ಅವಧಿಗೂ ಮುನ್ನ ಜನಿಸಿದ ಕಾರಣದದಿಂದ ಅವಳಿ ಮಕ್ಕಳು ಮೃತಪಟ್ಟಿವೆ ಎಂದು ತಿಳಿಸಿ ಪ್ಲಾಸ್ಟಿಕ್ ಬ್ಯಾಗ್ ನಲ್ಲಿ ಎರಡು ಬಟ್ಟೆಯಲ್ಲಿ ಸುತ್ತಿ ನೀಡಿದ್ದರು, ಆದರೆ ಅಂತ್ಯಸಂಸ್ಕಾರ ವೇಳೆ ಮಗು ಉಸಿರಾಡುತ್ತಿತ್ತು ಎಂದು ತಿಳಿಸಿದ್ದಾರೆ.
ಪ್ರಕರಣದ ಕುರಿತು ತನಿಖೆಗೆ ಆದೇಶಿಸಲಾಗಿದ್ದು, ಈ ಕುರಿತು 72 ಘಂಟೆಗಳಲ್ಲಿ ಪ್ರಾಥಮಿಕ ವರದಿಯನ್ನು ನೀಡಬೇಕು. ತನಿಕೆಯ ಅಂತಿಮ ವರದಿಯನ್ನು ಒಂದು ವಾರದಲ್ಲಿ ನೀಡಬೇಕು ಎಂದು ಆರೋಗ್ಯ ಸಚಿವರಾದ ಸತ್ಯೇಂದರ್ ಜೈನ್ ಆದೇಶದಲ್ಲಿ ಹೇಳಿದ್ದಾರೆ. ಈ ಕುರಿತು ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ದೆಹಲಿ ಸರ್ಕಾರಕ್ಕೆ ಸೂಚಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವರಾದ ಜೆಪಿ ನಡ್ಡಾ ಹೇಳಿದ್ದಾರೆ.
ಘಟನೆ ಕುರಿತು ಸ್ಪಷ್ಟನೆ ನೀಡಿರುವ ಆಸ್ಪತ್ರೆ ಅಧಿಕಾರಿಗಳು, 22 ವಾರಗಳ ಅವಳಿ ಮಕ್ಕಳ ಜನನವಾಗಿದ್ದು, ತಪ್ಪಾಗಿ ಮಕ್ಕಳು ಮೃತಪಟ್ಟಿವೆ ಎಂದು ಪೋಷಕರಿಗೆ ಹಸ್ತಾಂತರಿಸಲಾಗಿತ್ತು. ಅದರಲ್ಲಿ ಒಂದು ಮಗು ಬದುಕಿತ್ತೆಂಬುದು ಗೊತ್ತಾಗಿದೆ. ಈ ಘಟನೆಯಿಂದ ನಮಗೆ ನೋವಾಗಿದೆ. ಈ ಬಗ್ಗೆ ತನಿಖೆ ಆರಂಭವಾಗಿದೆ. ಇದಕ್ಕೆ ಕಾರಣರಾದ ವೈದ್ಯರನ್ನು ರಜೆ ಮೇಲೆ ಕಳುಹಿಸಲಾಗಿದೆ. ಪೋಷಕರ ಜೊತೆ ನಾವು ಸಂಪರ್ಕದಲ್ಲಿದ್ದು, ಅವರಿಗೆ ಅಗತ್ಯ ನೆರವು ಒದಗಿಸುತ್ತಿದ್ದೇವೆ ಎಂದು ತಿಳಿಸಿದೆ.