Corona
ಕೊರೊನಾ ಭೀತಿ ನಡುವೆ ಜನಿಸಿದ ಮಗುವಿಗೆ ‘ಲಾಕ್ಡೌನ್’ ಎಂದು ಹೆಸರಿಟ್ಟ ದಂಪತಿ

– ರಾಷ್ಟ್ರೀಯ ಹಿತಾಸಕ್ತಿ ಸಂಕೇತವಾಗಿ ಹೆಸರು
– ಕೇಂದ್ರ ಸರ್ಕಾರ, ಪ್ರಧಾನಿ ನಿರ್ಧಾರಕ್ಕೆ ಶ್ಲಾಘನೆ
ಲಕ್ನೋ: ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ದೇಶಾದ್ಯಂತ ಲಾಕ್ಡೌನ್ ಮಾಡಲಾಗಿದೆ. ಆದರೆ ಉತ್ತರ ಪ್ರದೇಶದ ದಂಪತಿ ಲಾಕ್ಡೌನ್ನಲ್ಲಿ ಮಗು ಜನಿಸಿದ್ದಕ್ಕೆ ಮಗನಿಗೆ ‘ಲಾಕ್ಡೌನ್’ ಅಂತಲೇ ಹೆಸರಿಟ್ಟಿದ್ದಾರೆ.
ಇತ್ತೀಚೆಗೆ ಹೆಣ್ಣು ಮಗುವೊಂದಕ್ಕೆ ‘ಕೊರೊನಾ’ ಎಂದು ನಾಮಕರಣ ಮಾಡಿದ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು. ಇದೇ ಬೆನ್ನಲ್ಲೇ ಈಗ ಗಂಡು ಮಗುವಿಗೆ ‘ಲಾಕ್ಡೌನ್’ ಎಂದು ನಾಮಕರಣ ಮಾಡಿ ಉತ್ತರ ಪ್ರದೇಶ ದಂಪತಿ ಸುದ್ದಿಯಾಗಿದ್ದಾರೆ.
ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ಖುಖುಂಡು ಗ್ರಾಮದಲ್ಲಿ ಈ ಘಟನೆ ನಡೆದಿದೆ. ಖುಖುಂಡು ಗ್ರಾಮದ ನಿವಾಸಿ ಪವನ್ ಅವರು ತಮ್ಮ ಮಗನಿಗೆ ಸೋಮವಾರದಂದು ‘ಲಾಕ್ಡೌನ್’ ಎಂದು ನಾಮಕರಣ ಮಾಡಿದ್ದಾರೆ.
ನನ್ನ ಮಗ ಲಾಕ್ಡೌನ್ ಸಮಯದಲ್ಲಿ ಜನಿಸಿದ್ದಾನೆ. ಇಡೀ ವಿಶ್ವವನ್ನೇ ಕೊರೊನಾ ವೈರಸ್ ಕಾಡುತ್ತಿದೆ. ಭಾರತದಲ್ಲೂ ಅಟ್ಟಹಾಸ ಮೆರೆಯುತ್ತಿರುವ ಮಾಹಾಮಾರಿ ಕೊರೊನಾ ಹರಡದಂತೆ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನೇ ಲಾಕ್ಡೌನ್ ಮಾಡಿದ್ದಾರೆ. ಇದು ಒಳ್ಳೆಯ ನಿರ್ಧಾರ, ಸಾರ್ವಜನಿಕರ ಜೀವ ಉಳಿಸಲು ಸರ್ಕಾರ ತೆಗೆದುಕೊಳ್ಳುತ್ತಿರುವ ನಿರ್ಧಾರಗಳು, ಕ್ರಮಗಳು ನಿಜಕ್ಕೂ ಶ್ಲಾಘನೀಯ. ರಾಷ್ಟ್ರೀಯ ಹಿತಾಸಕ್ತಿಯಿಂದ ಲಾಕ್ಡೌನ್ ಮಾಡಲಾಗಿದೆ. ಹೀಗಾಗಿ ಈ ಸಮಯದಲ್ಲಿ ಜನಿಸಿದ ನನ್ನ ಮಗನಿಗೆ ‘ಲಾಕ್ಡೌನ್’ ಎಂದೇ ಹೆಸರಿಟ್ಟಿದ್ದೇವೆ ಎಂದು ಪವನ್ ಅವರು ತಿಳಿಸಿದ್ದಾರೆ.
ನನ್ನ ಮಗನ ಹೆಸರು ಕೇಳಿದ ತಕ್ಷಣ ಸ್ವಹಿತಾಸಕ್ತಿಗಿಂತ ರಾಷ್ಟ್ರೀಯ ಹಿತಾಸಕ್ತಿ ಮುಖ್ಯ ಎನ್ನುವುದು ಎಲ್ಲರಿಗೂ ತಿಳಿಯಬೇಕು. ನಾವಂತೂ ಲಾಕ್ಡೌನ್ ನಿಯಮವನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೇವೆ. ಹೀಗಾಗಿ ಸದ್ಯ ಯಾವುದೇ ಧಾರ್ಮಿಕ ಕಾರ್ಯಕ್ರಮ, ಸಮಾರಂಭಗಳನ್ನು ಮಾಡುತ್ತಿಲ್ಲ. ದಯವಿಟ್ಟು ಈಗ ಯಾರೂ ಮಗುವನ್ನು ನೋಡಲು ಮನೆಗೆ ಬರಬೇಡಿ ಎಂದು ಸಂಬಂಧಿಕರಿಗೆ ಪವನ್ ಅವರು ಮನವಿ ಮಾಡಿಕೊಂಡಿದ್ದಾರೆ.
ಈ ಹಿಂದೆ ಗೋರಖ್ಪುರದಲ್ಲಿ ಮಾರ್ಚ್ 22ರಂದು ಜನತಾ ಕರ್ಫ್ಯೂ ದಿನದಂದು ಹೆಣ್ಣು ಮಗು ಜನಿಸಿದ್ದು, ಆ ಮಗುವಿಗೆ ‘ಕೊರೊನಾ’ ಎಂದು ಹೆಸರಿಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮಗುವಿನ ಕುಟುಂಬ, ಕೊರೊನಾ ವೈರಸ್ ಅಪಾಯಕಾರಿ, ಜೀವವನ್ನು ತೆಗೆಯುತ್ತದೆ ಎಂದು ತಿಳಿದಿದೆ. ಆದರೆ ಅದು ಜಗತ್ತನ್ನು ಒಂದು ಮಾಡುವ ಒಳ್ಳೆಯ ಕೆಲಸವನ್ನೂ ಮಾಡಿದೆ. ಹೀಗಾಗಿ ಜನರ ಒಗ್ಗಟ್ಟಿನ ಸಂಕೇತವಾಗಿ ಮಗುವಿಗೆ ‘ಕೊರೊನಾ’ ಎಂದು ಹೆಸರಿಟ್ಟಿದ್ದೇವೆ ಎಂದು ತಿಳಿಸಿತ್ತು.
