ಪುಣೆ: ಇಲ್ಲಿನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದ ಮೊದಲ ದಿನದಾಟದಲ್ಲಿ ಭಾರತೀಯ ಸ್ಪಿನ್ನರ್‌ಗಳಾದ ವಾಷಿಂಗ್ಟನ್ ಸುಂದರ್ (Washington Sundar) ಹಾಗೂ ರವಿಚಂದ್ರನ್ ಅಶ್ವಿನ್ ಭರ್ಜರಿ ಕಮಾಲ್ ಮಾಡಿದ್ದಾರೆ.
45 ತಿಂಗಳ ಬಳಿಕ ಟೆಸ್ಟ್ ಕ್ರಿಕೆಟ್ ಅಖಾಡಕ್ಕಿಳಿದ ವಾಷಿಂಗ್ಟನ್ ಸುಂದರ್ 23.1 ಓವರ್‌ಗಳಲ್ಲಿ 59 ರನ್ ಬಿಟ್ಟುಕೊಟ್ಟು ಪ್ರಮುಖ 7 ವಿಕೆಟ್ ಕಬಳಿಸುವ ಮೂಲಕ ಕಿವೀಸ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಲು ಸಹಕಾರಿಯಾಗಿದ್ದಾರೆ. ಇದರೊಂದಿಗೆ ಸ್ಪಿನ್ ಮಾಂತ್ರಿಕ ಆರ್. ಅಶ್ವಿನ್ (Ravichandran Ashwin) 3 ವಿಕೆಟ್ ಪಡೆದು, ಮೊದಲ ದಿನದಾಟದಲ್ಲಿ ಸ್ಪಿನ್ನರ್‌ಗಳೇ ಮೇಲುಗೈ ಸಾಧಿಸಿದ್ದಾರೆ.
ಭಾರತದ (Team India) ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಮೊದಲ ದಿನವೇ ಕಿವೀಸ್ (Newzealand) 79.1 ಓವರ್‌ಗಳಲ್ಲಿ 259 ರನ್‌ಗಳಿಗೆ ಆಲೌಟ್ ಆಗಿದೆ. ಬಳಿಕ ತನ್ನ ಸರದಿಯ ಮೊದಲ ಇನ್ನಿಂಗ್ಸ್ ಆರಂಭಿಸಿರುವ ಟೀಂ ಇಂಡಿಯಾ 11 ಓವರ್‌ಗಳಲ್ಲಿ 16 ರನ್‌ಗಳಿಗೆ ಒಂದು ವಿಕೆಟ್ ಕಳೆದುಕೊಂಡಿದೆ. ಈ ಮೂಲಕ 243 ರನ್ ಹಿನ್ನಡೆಯಲ್ಲಿದೆ. ರೋಹಿತ್ ಶರ್ಮಾ (Rohit Sharma) ಡಕೌಟ್ ಆಗಿ ಪೆವಿಲಿಯನ್‌ಗೆ ಮರಳಿದ್ದಾರೆ. ಇನ್ನೂ ಯಶಸ್ವಿ ಜೈಸ್ವಾಲ್ (6 ರನ್), ಶುಭಮನ್ ಗಿಲ್ (10 ರನ್) ಗಳಿಸಿ ಕ್ರೀಸ್‌ನಲ್ಲಿದ್ದು, ಶುಕ್ರವಾರ 2ನೇ ದಿನದ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಸ್ಪಿನ್ನರ್‌ಗಳ ಆಟಕ್ಕೆ ನೆಲಕಚ್ಚಿದ ಕಿವೀಸ್:
ಮೊದಲ ಟೆಸ್ಟ್ ಪಂದ್ಯದಲ್ಲಿ ಅಬ್ಬರಿಸಿದ್ದ ಕಿವೀಸ್ ಬ್ಯಾಟರ್‌ಗಳು 2ನೇ ಟೆಸ್ಟ್ ಪಂದ್ಯದಲ್ಲಿ ನೆಲ ಕಚ್ಚಿದರು. ಡಿವೋನ್ ಕಾನ್ವೆ, ರಚಿನ್ ರವೀಂದ್ರ, ಮಿಚೆಲ್ ಸ್ಯಾಂಟ್ನರ್ ಹೊರತುಪಡಿಸಿದ್ರೆ, ಉಳಿದ ಅಗ್ರ ಕ್ರಮಾಂಕದ ಬ್ಯಾರಟ್‌ಗಳು ಅಲ್ಪಮೊತ್ತಕ್ಕೆ ಪೆವಿಲಿಯನ್‌ಗೆ ಮರಳಿದರು.
ಕಿವೀಸ್ ಪರ ಡಿವೋನ್ ಕಾನ್ವೆ 76 ರನ್ (141 ಎಸೆತ, 11 ಬೌಂಡರಿ), ರಚಿನ್ ರವೀಂದ್ರ 65 ರನ್ (105 ಎಸೆತ, 5 ಬೌಂಡರಿ, 1 ಸಿಕ್ಸರ್) ಗಳಿಸಿದ್ರೆ, ಮಿಚೆಲ್ ಸ್ಯಾಂಟ್ನರ್ 33 ರನ್, ಟಾಮ್ ಲಾಥಮ್ 15 ರನ್, ವಿಲ್ ಯಂಗ್, ಡೇರಿಲ್ ಮಿಚೆಲ್ ತಲಾ 18 ರನ್, ಟಾಮ್ ಬ್ಲಂಡೆಲ್ 3 ರನ್, ಗ್ಲೆನ್ ಫಿಲಿಪ್ಸ್ 9 ರನ್, ಟಿಮ್ ಸೌಥಿ 5 ರನ್ ಆಜಾಝ್ ಪಟೇಲ್ 4 ರನ್ ಗಳಿಸಿ ಔಟಾದರು. ವಿಲಿಯಂ ಒ ರೂರ್ಕಿ ಒಂದು ಎಸೆತವನ್ನೂ ಎದುರಿಸದೇ ಅಜೇಯರಾಗುಳಿದರು.