Connect with us

Cricket

ಭಾರತದಲ್ಲಿ ಎಲ್ಲಾ 5 ಸರಣಿ ಸೋತಿದೆ ನ್ಯೂಜಿಲೆಂಡ್! – ಭಾನುವಾರ ಮೊದಲ ಒನ್ ಡೇ ಮ್ಯಾಚ್

Published

on

ಮುಂಬೈ: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಿನ 3 ಏಕದಿನ ಪಂದ್ಯಗಳ ಸರಣಿಯ ಮೊದಲ ಪಂದ್ಯ ಭಾನುವಾರ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಎರಡೂ ತಂಡಗಳ ಮುಂಬೈನಲ್ಲಿ ಬೀಡು ಬಿಟ್ಟಿದ್ದು ಮೊದಲ ಮುಖಾಮುಖಿಗೆ ಪ್ರಾಕ್ಟೀಸ್ ನಡೆಸುತ್ತಿದ್ದಾರೆ.

ವಿರಾಟ್ ಕೊಹ್ಲಿ ನಾಯಕತ್ವದ ಟೀಂ ಇಂಡಿಯಾದ ಸದ್ಯದ ಫಾರ್ಮ್ ಹಾಗೂ ನ್ಯೂಜಿಲೆಂಡ್ ತಂಡ ಇದುವರೆಗೆ ಭಾರತದಲ್ಲಿ ಮಾಡಿದ ಸಾಧನೆ ನೋಡಿದರೆ ಟೀಂ ಇಂಡಿಯಾವೇ ಗೆಲ್ಲುವ ಫೇವರಿಟ್ ತಂಡ ಎನ್ನಬಹುದು. ಕಾರಣ ಇದುವರೆಗೆ ಟೀಂ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಭಾರತದಲ್ಲಿ ಆಡಿದ 32 ಪಂದ್ಯಗಳಲ್ಲಿ ಕೇವಲ 7 ಪಂದ್ಯಗಳನ್ನು ಮಾತ್ರ ಗೆದ್ದಿದೆ. ಭಾರತ 24 ಪಂದ್ಯಗಳನ್ನು ಗೆದ್ದು ಮೇಲುಗೈ ಸಾಧಿಸಿದೆ. ಒಂದು ಪಂದ್ಯದಲ್ಲಿ ಯಾವುದೇ ಫಲಿತಾಂಶ ಬಂದಿರಲಿಲ್ಲ. 1987ರಿಂದ ನ್ಯೂಜಿಲೆಂಡ್ ಭಾರತ ತಂಡದ ವಿರುದ್ಧ ಅಟವಾಡುತ್ತಿದೆ.

ಟೆಸ್ಟ್ ಆಟವಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ವಿರುದ್ಧ ಭಾರತದಲ್ಲಿ ನ್ಯೂಜಿಲೆಂಡ್ ಗಿಂತ ಕಳಪೆ ಪ್ರದರ್ಶನ ನೀಡಿರುವುದು ಜಿಂಬಾಬ್ವೆ ಮಾತ್ರ. ಜಿಂಬಾಬ್ವೆ ಭಾರತದಲ್ಲಿ ಒಟ್ಟು 19 ಏಕದಿನ ಪಂದ್ಯಗಳನ್ನಾಡಿದ್ದು ಇದರಲ್ಲಿ ಮೂರು ಪಂದ್ಯಗಳನ್ನು ಮಾತ್ರ ಗೆದ್ದಿತ್ತು. 15 ಪಂದ್ಯದಲ್ಲಿ ಭಾರತ ಗೆದ್ದರೆ ಒಂದು ಪಂದ್ಯ ಟೈ ಆಗಿತ್ತು.

ಭಾರತದಲ್ಲಿ ಇದುವರೆಗೆ ನ್ಯೂಜಿಲೆಂಡ್ 5 ಏಕದಿನ ಸರಣಿಯನ್ನು ಆಡಿದೆ. ಈ ಐದೂ ಸರಣಿಗಳಲ್ಲೂ ಭಾರತವೇ ಗೆದ್ದು ಮೇಲುಗೈ ಸಾಧಿಸಿದೆ. 1988ರಲ್ಲಿ 4-0, 1995ರಲ್ಲಿ 3-2, 1999ರಲ್ಲಿ 3-2, 2010ರಲ್ಲಿ 5-0 ಹಾಗೂ 2016ರಲ್ಲಿ 3-2 ಅಂತರದಿಂದ ಭಾರತ ಗೆಲುವು ಸಾಧಿಸಿತ್ತು.

ಭಾರತ ಪ್ರವಾಸದಲ್ಲಿ ನ್ಯೂಜಿಲೆಂಡ್ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಲಿದೆ. 2ನೇ ಏಕದಿನ ಅ.25ರಂದು ಪುಣೆ ಹಾಗೂ 3ನೇ ಏಕದಿನ ಪಂದ್ಯ ಅ.29ರಂದು ಕಾನ್ಪುರದಲ್ಲಿ ನಡೆಯಲಿದೆ.

ಮೊದಲ ಟಿ20 ಪಂದ್ಯ ನವಂಬರ್ 1ರಂದು ದೆಹಲಿ, 2ನೇ ಟಿ20 ನ.4ರಂದು ರಾಜ್ ಕೋಟ್ ಹಾಗೂ ಸರಣಿಯ ಕೊನೆಯ ಟಿ20 ಪಂದ್ಯ ನ.7ರಂದು ತಿರುವನಂತಪುರಂನಲ್ಲಿ ನಡೆಯಲಿದೆ. ಏಕದಿನ ಪಂದ್ಯಗಳು ಮಧ್ಯಾಹ್ನ 1.30ಕ್ಕೆ ಆರಂಭವಾಗಲಿದ್ದು, ಟಿ20 ಪಂದ್ಯಗಳು ರಾತ್ರಿ 7 ಗಂಟೆಗೆ ಆರಂಭಗೊಳ್ಳಲಿದೆ.

 

Click to comment

Leave a Reply

Your email address will not be published. Required fields are marked *