Connect with us

Chikkamagaluru

ಹೊರ ಜಿಲ್ಲೆ, ರಾಜ್ಯಕ್ಕೆ ಹೋಗ್ತಿರೋ ಕಾಫಿನಾಡಿಗರು

Published

on

ಚಿಕ್ಕಮಗಳೂರು: ಹೊಸ ವರ್ಷ ಆಚರಣೆಗೆ ಕಾಫಿನಾಡು ಈಗಾಗಲೇ ಸನ್ನದ್ಧವಾಗಿದೆ. ಹೊಸ ವರ್ಷವನ್ನು ವೆಲ್‍ಕಮ್ ಹೇಳಲು ಕಾಫಿನಾಡಿಗರು ಹೊರ ಜಿಲ್ಲೆ-ರಾಜ್ಯಕ್ಕೆ ಹೋಗುತ್ತಿದ್ದಾರೆ. ಹೊರರಾಜ್ಯ ಹಾಗೂ ಜಿಲ್ಲೆಯವರು ಕಾಫಿನಾಡಿನಲ್ಲಿ ಜಮಾಯಿಸಿದ್ದಾರೆ. ಆದರೆ ಪೊಲೀಸ್ ಇಲಾಖೆ ಹೊಸ ವರ್ಷ ಆಚರಣೆಗೆ ಚಿಕ್ಕಮಗಳೂರಿಗೆ ಬರೋ ಪ್ರವಾಸಿಗರಿಗೆ ಹಾಗೂ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಪೊಲೀಸ್ ಇಲಾಖೆ ಪ್ರವಾಸಿಗರಿಗೆ ನೀಡಿರುವ ಸೂಚನೆಗಳು:
ಸವಾರರು ಪಾನಮತ್ತರಾಗಿ ವಾಹನ ಚಲಾಯಿಸುವಂತಿಲ್ಲ. ಅಲ್ಲದೇ ಏಕಾಂಗಿಯಾಗಿ ಅಥವಾ ಸಣ್ಣ ಗುಂಪುಗಳಾಗಿ ಪ್ರತ್ಯೇಕ ಸ್ಥಳಗಳಿಗೆ ಹಾಗೂ ಎಲ್ಲೆಂದರಲ್ಲಿ ಹೋಗುವಂತಿಲ್ಲ. ಇನ್ನೂ ನೋಂದಾಯಿಸದೇ ಇರುವ ಸ್ಥಳ, ಅಂಗಡಿ ಅಥವಾ ವ್ಯಕ್ತಿಗಳಿಂದ ಮದ್ಯವನ್ನ ಖರೀದಿಸಬೇಡಿ ಎಂದು ಸೂಚಿಸಿದೆ.

ಅಕ್ರಮ ಹಾಗೂ ಮಾದಕ ವಸ್ತುಗಳ ಬಳಕೆಯ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅಂತಹ ವಸ್ತುಗಳ ಬಳಕೆದಾರರಾಗಲಿ ಅಥವಾ ಮಾರಾಟಗಾರರು ಕಂಡು ಬಂದಲ್ಲಿ ಅವರ ವಿರುದ್ಧ ತಕ್ಷಣ ಬಂಧಿಸಿ ಕಾನೂನು ಕ್ರಮ ಜರುಗಿಸೋದಾಗಿ ಎಚ್ಚರಿಸಿದ್ದಾರೆ. ಅಲ್ಲದೇ ರಸ್ತೆಗಳಲ್ಲಿ ಕುಡಿದು ಗಲಾಟೆ ಮಾಡೋದಾಗಲಿ, ಅವ್ಯವಸ್ಥೆ ಮಾಡೋದು ಕಂಡು ಬಂದಲ್ಲಿ ಅಥವಾ ವೇಗವಾಗಿ ವಾಹನಗಳನ್ನ ಓಡಿಸಿದರೆ ಅಂತಹ ವಾಹನಗಳನ್ನ ವಶಪಡಿಸಿಕೊಂಡು ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಮಾಲೀಕರಿಗೆ ನೀಡಿರೋ ಸೂಚನೆಗಳು:
ಅನುಮತಿ ನೀಡಿರುವ ಸಮಯವನ್ನ ಮೀರಿ ಮದ್ಯ ಮಾರಾಟ ಮಾಡೋದಾದರೆ ಎಲ್ಲಾ ಸಂಸ್ಥೆಗಳು ಅಬಕಾರಿ ಹಾಗೂ ಪೊಲೀಸ್ ಇಲಾಖೆಯಿಂದ ಸೂಕ್ತವಾದ ಅನುಮತಿ ಪಡೆದಿರಬೇಕು. ಅನುಮತಿ ನೀಡಿದ ಸಮಯ ಬಿಟ್ಟು ಹೊರಾಂಗಣ ಅಥವಾ ಒಳಾಂಗಣದಲ್ಲಾಗಲಿ ಲೌಡ್‍ಸ್ಪೀಕರ್ ಹಾಗೂ ಡಿ.ಜೆ.ಗಳನ್ನ ಬಳಸುವಂತಿಲ್ಲ. ಒಂದು ವೇಳೆ ಬಳಸೋದಾದರೆ ಅನುಮತಿ ಕಡ್ಡಾಯ.

ಹೋಂಸ್ಟೇಗಳು ಕೂಡ ವಾಣಿಜ್ಯೇತರ ಸಂಸ್ಥೆಗಳಾಗಿವೆ. ಆದ್ದರಿಂದ ಅನುಮತಿಯ ಸಮಯವನ್ನ ಮೀರಿ ಹೋಂಸ್ಟೇಗಳ ಹೊರಾಂಗಣದಲ್ಲಿ ಲೌಡ್ ಸ್ಪೀಕರ್ ಹಾಗೂ ಡಿ.ಜೆಗಳ ಬಳಕೆಗೆ ಅನುಮತಿ ಇಲ್ಲ. ಹೋಂಸ್ಟೇಗಳಲ್ಲಿ ಬಾರ್ ಹಾಗೂ ಮದ್ಯ ಮಾರಾಟಕ್ಕೆ ತಾತ್ಕಾಲಿಕ ಅಥವಾ ಶಾಶ್ವತವಾಗಿ ಅನುಮತಿ ಇಲ್ಲ. ಹೋಂಸ್ಟೇಗಳಿಗೆ ಸಂಬಂಧಿಸಿದ ಯಾರೇ ಆದರು ಮದ್ಯವನ್ನ ಮಾರಾಟ ಮಾಡುವುದು ಕಂಡು ಬಂದರೆ ಅವರ ವಿರುದ್ಧ ಕರ್ನಾಟಕ ಅಬಕಾರಿ ಕಾಯ್ದೆಯಡಿ ಕ್ರಮ ಕೈಗೊಳ್ಳುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ಹೊರಾಂಗಣ ಚಟುವಟಿಕೆಗಳನ್ನ ಆಯೋಜಿಸಲು ಪೊಲೀಸ್ ಹಾಗೂ ನಗರಗಳಲ್ಲಿ ನಗರಸಭೆ ಅನುಮತಿಯನ್ನ ಕಡ್ಡಾಯವಾಗಿ ಪಡೆದಿರಬೇಕು. ಪ್ರವಾಸಿಗರು ತಮ್ಮ ವಾಹನಗಳನ್ನ ಎಲ್ಲೆಂದರಲ್ಲಿ, ಹೇಗಂದರೆ ಹಾಗೆ ಅಪಾಯಕಾರಿಯಾಗಿ ಪಾರ್ಕ್ ಮಾಡುವಂತಿಲ್ಲ. ಸಂಸ್ಥೆಗಳು ಅವರ ನಿರೀಕ್ಷಿತ ಜನಸಂದಣಿಗೆ ಅನುಗುಣವಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಇದರಿಂದ ಟ್ರಾಫಿಕ್ ಜಾಮ್ ಆದರೆ ಸಂಬಂಧಪಟ್ಟ ಸಂಸ್ಥೆಗಳು ಸಮಾನ ಹೊಣೆ ಹೊರಬೇಕಾಗುತ್ತೆ.

ಹೊಸ ವರ್ಷದ ಆಚರಣೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಪ್ರವಾಸಿಗರು ಹಾಗೂ ಹೊಸ ವರ್ಷದ ಆಚರಣೆಗೆ ಕಾಫಿನಾಡಿಗೆ ಬರೋರ ಸ್ವಾತಂತ್ರಕ್ಕೂ ಧಕ್ಕೆಯಾಗದಂತೆ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನ ಕೈಗೊಂಡಿದೆ.

Click to comment

Leave a Reply

Your email address will not be published. Required fields are marked *