ಬೆಂಗಳೂರು: ಹೊಸ ವರ್ಷದ ಆರಂಭದಲ್ಲಿರುವ ನಮಗೆ ಈ ವರ್ಷ ಪ್ಲಾಸ್ಟಿಕ್ ಬದಲಿಗೆ `ಪರಿಸರಸ್ನೇಹಿ ಪರ್ಯಾಯ ವಸ್ತುಗಳ ಬಳಕೆ’ಯ ಸಂಕಲ್ಪವಾಗಲಿ ಎಂದು ಅದಮ್ಯ ಚೇತನದ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಕರೆ ನೀಡಿದರು.
ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಶಾರದಾ ಸ್ತ್ರೀ ಸಮಾಜದಲ್ಲಿ `ಅನಂತಕುಮಾರ್ ಗ್ರಂಥಾಲಯ’ ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಪ್ಲಾಸ್ಟಿಕ್ ನಿಷೇಧ ಮಾಡಲಾಗಿದೆ. ನಾವು ಪ್ಲಾಸ್ಟಿಕ್ ಬಳಕೆಯನ್ನು ಕೈಬಿಡಬೇಕಿದೆ. ಬಳಸಿದ ಪ್ಲಾಸ್ಟಿಕ್ ಅಥವಾ ಪ್ಲಾಸ್ಟಿಕ್ ಕವರಿನ ಒಂದು ಸಣ್ಣ ಚೂರು ಸಹ ಪರಿಸರಕ್ಕೆ ಹಾನಿಯನ್ನುಂಟು ಮಾಡುತ್ತದೆ. ಹೀಗಾಗಿ ಅದರ ಬಳಕೆಯನ್ನು ಬಿಡಬೇಕು ಎಂದು ಸಲಹೆ ನೀಡಿದರು.
Advertisement
Advertisement
ಈ ಸಣ್ಣ ಪ್ಲಾಸ್ಟಿಕ್ ಚೂರನ್ನು ದನ ಕರುಗಳು ತಿಂದು ಅನಾರೋಗ್ಯಕ್ಕೆ ತುತ್ತಾಗುತ್ತವೆ ಅಥವಾ ಪ್ರಾಣವನ್ನೂ ಕಳೆದುಕೊಳ್ಳುತ್ತವೆ. ಅಲ್ಲದೆ ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗದಿರುವುದರಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮವನ್ನುಂಟು ಮಾಡುತ್ತದೆ. ಹೀಗಾಗಿ ಪ್ಲಾಸ್ಟಿಕ್ ಅನ್ನು ಪುನರ್ ಬಳಕೆಗೆ ನೀಡಬೇಕು. ಅಲ್ಲದೆ ಹೊಸ ವರ್ಷದ ಆರಂಭದಲ್ಲಿರುವ ನಾವೆಲ್ಲರೂ ಪ್ಲಾಸ್ಟಿಕ್ ಬದಲು ಪರಿಸರಸ್ನೇಹಿ ಪರ್ಯಾಯ ವಸ್ತುಗಳ ಬಳಕೆ ಮಾಡುವ ಸಂಕಲ್ಪವನ್ನು ಮಾಡಬೇಕು ಎಂದರು.