ಚಿಕ್ಕಬಳ್ಳಾಪುರ: ಹೊಸ ವರ್ಷಾಚರಣೆ ಅಂಗವಾಗಿ ವಿಶ್ವವಿಖ್ಯಾತ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ಪ್ರವಾಸಿಗರ ಪ್ರವೇಶಕ್ಕೆ ನಿರ್ಬಂಧವನ್ನು ಹಾಕಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಚಿಕ್ಕಬಳ್ಳಾಪುರ ತಾಲೂಕು ನಂದಿ ಗ್ರಾಮದ ಬಳಿಯ ನಂದಿಗಿರಿಧಾಮಕ್ಕೆ ಡಿಸೆಂಬರ್ 31ರ ಸಂಜೆ 4 ಗಂಟೆಯಿಂದ, ಹೊಸ ವರ್ಷ 2020ರ ಜನವರಿ 1ರ ಬೆಳಿಗ್ಗೆ 8 ಗಂಟೆಯವರೆಗೂ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಆರ್.ಲತಾ ಆದೇಶ ಹೊರಡಿಸಿದ್ದಾರೆ. ಹೊಸ ವರ್ಷಾಚರಣೆ ಅಂಗವಾಗಿ ನಂದಿಗಿರಿಧಾಮಕ್ಕೆ ಹೆಚ್ಚಿನ ಪ್ರವಾಸಿಗರು ಆಗಮಿಸುವ ಸಾಧ್ಯತೆ ಇದೆ. ಹೀಗಾಗಿ ನಂದಿಗಿರಿಧಾಮದ ಪರಿಸರ ಹಾಗೂ ಪಾವಿತ್ರ್ಯತೆಯನ್ನ ಕಾಪಾಡುವುದರ ಉದ್ದೇಶದ ಜೊತೆಗೆ ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಪ್ರವಾಸಿಗರು ಈ ಸಮಯದಲ್ಲಿ ನಂದಿಗಿರಿಧಾಮ ಪ್ರವೇಶ ಮಾಡುವುದನ್ನ ನಿಷೇಧಿಸಲಾಗಿದೆ.
Advertisement
Advertisement
ನಂದಿಗಿರಿಧಾಮ ರಸ್ತೆ ಸಹ ಸಾಕಷ್ಟು ಅಂಕು ಡೊಂಕಿನಿಂದ ಕೂಡಿದೆ. ಹೊಸ ವರ್ಷಾಚರಣೆಯ ಮೋಜು ಮಸ್ತಿ ನಡುವೆ, ಮದ್ಯ ಸೇವೆನೆ ಮಾಡಿ ವಾಹನ ಚಾಲನೆ ಮಾಡುವುದರಿಂದ ಅಪಘಾತಗಳು ಸಹ ಸಂಭವಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಪ್ರವಾಸಿಗರ ಹಿತದೃಷ್ಟಿಯಿಂದ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ನಂದಿಗಿರಿಧಾಮದ ಪ್ರವೇಶವನ್ನ ನಿರ್ಬಂಧಿಸಿ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿದೆ. ಜನವರಿ 1ರ ಬೆಳಿಗ್ಗೆ 8 ಗಂಟೆಯ ನಂತರ ಎಂದಿನಂತೆ ನಂದಿಗಿರಿಧಾಮ ಪ್ರವೇಶಕ್ಕೆ ಪ್ರವಾಸಿಗರಿಗೆ ಮುಕ್ತ ಅವಕಾಶ ಕಲ್ಪಿಸಲಾಗುತ್ತದೆ.