ಹುಬ್ಬಳ್ಳಿ: ಹೊಸ ವರ್ಷ ಸಂಭ್ರಮಾಚರಣೆ ಮಾಡುತ್ತಿದ್ದ ಅನ್ಯ ರಾಜ್ಯದ ಯುವಕರ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಕಳೆದ ರಾತ್ರಿ ಹುಬ್ಬಳ್ಳಿಯ ಅಫೇಕ್ಸ್ ಪ್ಲಾಸ್ಟಿಕ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರು ಹೊಸ ವರ್ಷ ಆಚರಣೆ ಮಾಡುವ ವೇಳೆ ಈ ಘಟನೆ ಸಂಭವಿಸಿದೆ. ಮೂತ್ರ ವಿಸರ್ಜನೆ ಮಾಡುತ್ತಿದ್ದ ಯುವಕರಿಗೆ ಕಿಡಿಗೇಡಿಗಳು ಮೂತ್ರ ವಿಸರ್ಜನೆ ಮಾಡದಂತೆ ಅವಾಜ್ ಹಾಕಿದ್ದಾರೆ. ಈ ವೇಳೆ ಅನ್ಯರಾಜ್ಯದ ಯುವಕರು ಹಾಗೂ ಕಿಡಿಗೇಡಿಗಳ ಮಧ್ಯೆ ಮಾತಿನ ಚಕಮಕಿ ನಡೆದು ಗಲಾಟೆ ಸಂಭವಿಸಿದೆ.
ಬೈಕ್ ಮೇಲೆ ಬಂದಿದ್ದ 10-12 ಕಿಡಿಗೇಡಿಗಳು ಅನ್ಯರಾಜ್ಯದ ಕಾರ್ಮಿಕ ಯುವಕರ ರೂಂಗೆ ನುಗ್ಗಿ ಕಲ್ಲು ಬೊಂಬಿನಿಂದ ಹಲ್ಲೆ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಯುವಕರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಿಲ್, ಆಷಾರಾಮ, ವಿಜಯಲಾಲ, ಬೊಲೋ, ಕರಣ, ಹರಿದಯಾಳ ಮೇಲೆ ಹಲ್ಲೆ ನಡೆಸಲಾಗಿದ್ದು, ನಾಲ್ವರು ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಘಟನೆಯ ಕುರಿತು ಕಸಬಾಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಹಲ್ಲೆಗೊಳಗಾದ ಯುವಕರ ಬಳಿ ಮಾಹಿತಿ ಕಲೆ ಹಾಕಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಪೊಲೀಸರು ಈ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.