Connect with us

Chikkamagaluru

ಹೊಸ ವರ್ಷ ಸಂಭ್ರಮಾಚರಣೆ – ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್ ಜಾಮ್

Published

on

ಚಿಕ್ಕಮಗಳೂರು: ಹೊಸ ವರ್ಷ ಆಚರಣೆಗೆ ಕಾಫಿನಾಡು ಚಿಕ್ಕಮಗಳೂರು ತುಂಬಿ ತುಳುಕಿದ್ದು, ಭಾರೀ ವಾಹನಗಳಿಂದ ರಾಜ್ಯದ ಎತ್ತರದ ಶಿಖರ ಮುಳ್ಳಯ್ಯನಗಿರಿಯಲ್ಲಿ ಟ್ರಾಫಿಕ್ ಜಾಮ್ ಸಂಭವಿಸಿ, ಪ್ರವಾಸಿಗರು ಪರದಾಡುವಂತಾಗಿದೆ.

ಕಳೆದ ರಾತ್ರಿ ಹೋಂ ಸ್ಟೇ, ರೆಸಾರ್ಟ್‍ಗಲ್ಲಿ ವಾಸ್ತವ್ಯ ಮಾಡಿದ್ದ ಸಾವಿರಾರು ಪ್ರವಾಸಿಗರು ಇಂದು ಪ್ರಕೃತಿ ಸೌಂದರ್ಯ ಸವಿಯಲು ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠಕ್ಕೆ ಆಗಮಿಸಿದ್ದರು. ಪರಿಣಾಮ ಮಾರ್ಗ ಮಧ್ಯೆ ಅಲ್ಲಲ್ಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪ್ರವಾಸಿಗರೇ ವಾಹನಗಳಿಂದ ಕೆಳಗಿಳಿದು ಟ್ರಾಫಿಕ್ ಪೊಲೀಸ್ ಕೆಲಸ ಮಾಡಿ ವಾಹನಗಳನ್ನು ನಿಯಂತ್ರಿಸಿದ್ದು ಸಾಮಾನ್ಯವಾಗಿತ್ತು.

ರಾಜ್ಯ-ಹೊರರಾಜ್ಯಗಳಿಂದ ಬಂದಿದ್ದ ಸಾವಿರಾರು ಪ್ರವಾಸಿಗರು ಮುಗಿಲೆತ್ತರದ ಬೆಟ್ಟಗುಡ್ಡಗಳ ಮಧ್ಯೆ ನಿಂತು 2019ಕ್ಕೆ ಗುಡ್ ಬೈ ಹೇಳಿ, 2020ಕ್ಕೆ ಸ್ವಾಗತ ಕೋರಿದರು. ಗಿರಿಭಾಗದಲ್ಲಿ ಎಲ್ಲಿ ನೋಡಿದರು ಬೈಕು-ಕಾರುಗಳದ್ದೇ ಕಾರುಬಾರಾಗಿತ್ತು. ಇವತ್ತು ಒಂದೇ ದಿನ ಕಾರು, ಬೈಕ್, ಟೆಂಪೋ ಎಲ್ಲಾ ಸೇರಿ ಮೂರರಿಂದ ನಾಲ್ಕು ಸಾವಿರ ಬರೀ ವಾಹನಗಳೇ ಮುಳ್ಳಯ್ಯನಗಿರಿ ಜಮಾಯಿಸಿವೆ. ಸುಮಾರು 30 ರಿಂದ 40 ಸಾವಿರ ಪ್ರವಾಸಿಗರು ಕಾಫಿನಾಡ ಪ್ರಕೃತಿಗೆ ಸೌಂದರ್ಯಕ್ಕೆ ಶರಣಾಗತರಾಗಿದ್ದಾರೆ.

ಟ್ರಾಫಿಕ್ ನಡುವೆ ಹರಸಾಹಸ ಪಟ್ಕೊಂಡು ಗಿರಿಯ ತುದಿಗೆ ಹೋದಾಗ ಪ್ರವಾಸಿಗರ ಸಂತೋಷಕ್ಕೆ ಪಾರವೇ ಇರಲಿಲ್ಲ. ಸುತ್ತಲು ಹಸಿರ ರಾಶಿ. ಕಣ್ಣಿನ ದೃಷ್ಠಿ ಮುಗಿದ್ರು ಮುಗಿಯದ ಪ್ರಕೃತಿ ಸಂಪತ್ತು. ಮುಗಿಲೆತ್ತರದ ಬೆಟ್ಟಗುಡ್ಡಗಳ ಸಾಲು. ನಿಮಿಷಕ್ಕೊಮ್ಮೆ ಕಣ್ಣೆದುರಿಗೆ ಬಂದು ಮಾಯವಾಗೋ ಮಾಯಾವಿ ಮಂಜು. ಮೈಮರೆತು ನಿಂತ್ರೆ ನಾವು ಕಿಡ್ನ್ಯಾಪ್ ಆಗ್ತೀವೇನೀ ಎಂದು ಭಯವಾಗುವಂತೆ ಬೀಸೋ ಗಾಳಿ. ಸೆಲ್ಫಿಗೆ ಫೋಸೋ ಕೊಟ್ಟು ನಿಲ್ಲುವಷ್ಟರಲ್ಲಿ ತಬ್ಬಿಕೊಂಡು ಹಾಗೋ ಗಾಳಿಯ ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ. ಗಿರಿಯ ತುದಿಗೆ ಬಂದು ಪ್ರಕೃತಿ ಸೌಂದರ್ಯದಲ್ಲಿ ಸವಿಯುಷ್ಟರಲ್ಲಿ ಮುಳ್ಳಯ್ಯನ ಸ್ವಾಮಿಯ ದರ್ಶನ ಮಾಡಬೇಕು. ಆಗ ಮತ್ತೊಂದು ಗುಡ್ಡ ಹತ್ತಬೇಕು. ಆದರೆ ಎಷ್ಟೇ ಆಯಸವಾಗಿದ್ರು ಇಲ್ಲಿನ ಗಾಳಿ ಮೈ-ಮನವನ್ನು ತಿಳಿಗೊಳಿಸೋದ್ರಿಂದ ಪ್ರವಾಸಿಗರು ಸಂತೋಷದಿಂದಲೇ ಬೆಟ್ಟ ಹತ್ತಿ ದೇವರ ದರ್ಶನ ಪಡೆದರು.

ಮುಳ್ಳಯ್ಯನಗಿರಿ ಇನ್ನು ಹತ್ತಾರು ಕಿ.ಮೀ. ಇರೋವಾಗ್ಲೇ ಟ್ರಾಫಿಕ್ ಜಾಮ್‍ನಿಂದ ನಿಂತಿದ್ದ ಗಾಡಿಗಳು ನೋಡುಗರಿಗೆ ಇರುವೆಯಂತೆ ಭಾಸವಾಗುತ್ತಿತ್ತು. ದೂರದ ಊರುಗಳಿಂದ ಬಂದಿದ್ದ ಪ್ರವಾಸಿಗರು ಕೂಡ ಇಲ್ಲಿನ ಸೌಲಭ್ಯ ನೋಡಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪಾರ್ಕಿಂಗ್ ಇಲ್ಲ, ಪ್ಲಾಸ್ಟಿಕ್ ಕಡಿಮೆಯಾಗಿದ್ರು ಇನ್ನೂ ಇದೆ. ಎರಡೆರಡು ಕಡೆ ಹಣ ಕಟ್ಟಿಸಿಕೊಳ್ಳುತ್ತಾರೆ. ಆದರೆ ಪ್ರವಾಸಿಗರಿಗೆ ಯಾವುದೇ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಇಂತಹಾ ಸೌಂದರ್ಯವನ್ನು ಎಲ್ಲರೂ ಸೇರಿ ಉಳಿಸಬೇಕು. ಇದನ್ನು ಮತ್ತೆ ಸೃಷ್ಠಿಸಲು ಅಸಾಧ್ಯ. ಹಾಗಾಗಿ ಸ್ಥಳೀಯರು, ಪ್ರವಾಸಿಗರು ಹಾಗೂ ಸರ್ಕಾರ ಮೂವರು ಸೇರಿ ಈ ಸೌಂದರ್ಯವನ್ನು ರಕ್ಷಣೆ ಮಾಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

Click to comment

Leave a Reply

Your email address will not be published. Required fields are marked *