Connect with us

ಉತ್ತರಪ್ರದೇಶ ರೈತರ ಸಾಲ ಮನ್ನಾ- ಸಂಸತ್ತಿನಲ್ಲಿ ಮೋದಿ ಸರ್ಕಾರ ಹೇಳಿಕೆ

ಉತ್ತರಪ್ರದೇಶ ರೈತರ ಸಾಲ ಮನ್ನಾ- ಸಂಸತ್ತಿನಲ್ಲಿ ಮೋದಿ ಸರ್ಕಾರ ಹೇಳಿಕೆ

ನವದೆಹಲಿ: ರೈತರ ಸಾಲ ಮನ್ನಾ ಮಾಡಬೇಕೆಂಬ ವಿಷಯ ರಾಜಕೀಯ ನಾಯಕರಿಗೆ ಲಾಭ-ನಷ್ಟಗಳ ಲೆಕ್ಕಾಚಾರವಾಗಿದೆ. ಈ ನಡುವೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ನೀಡಿರುವ ಹೇಳಿಕೆ ಸಾಲ ಮನ್ನಾ ವಿಚಾರಕ್ಕೆ ಹೊಸ ತಿರುವು ನೀಡಿದೆ.

ಉತ್ತರಪ್ರದೇಶದಲ್ಲಿ ನಮ್ಮ ಸರ್ಕಾರ ರೈತರ ಸಾಲ ಮನ್ನಾ ಮಾಡಲಿದೆ. ಅದರ ಭಾರವನ್ನೆಲ್ಲಾ ಕೇಂದ್ರ ಸರ್ಕಾರ ಭರಿಸಲಿದೆ ಎಂದು ಕೇಂದ್ರ ಕೃಷಿ ಸಚಿವ ರಾಧ ಮೋಹನ್ ಸಿಂಗ್ ಹೇಳಿದ್ದಾರೆ.

ಲೋಕಸಭೆಯಲ್ಲಿ ರಾಷ್ಟ್ರೀಯ ಲೋಕದಳದ ನಾಯಕ ದುಶ್ಯಂತ್ ಚೌಟಾಲ ಕೇಳಿದ ಪ್ರಶ್ನೆಗೆ ಕೃಷಿ ಸಚಿವರು ಈ ಉತ್ತರ ನೀಡಿದ್ದಾರೆ. ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದ್ರೆ ಸಾಲ ಮನ್ನಾ ಮಾಡಿದ್ರೆ ಅದರಿಂದ ದುಷ್ಪರಿಣಾಮ ಬೀರಲಿದೆ ಎಂದು ಆರ್‍ಬಿಐ ಅಭಿಪ್ರಾಯಪಟ್ಟಿರುವುದಾಗಿ ಹಣಕಾಸು ಇಲಾಖೆ ಹೇಳಿದೆ ಎಂದು ಚೌಟಾಲ ಪ್ರಶ್ನಿಸಿದ್ರು.

ಇದಕ್ಕೆ ಉತ್ತರಿಸಿದ ರಾಧ ಮೋಹನ್ ಸಿಂಗ್, ಕೆಲವು ರಾಜ್ಯಗಳಲ್ಲಿ 3 % ಬಡ್ಡಿಯನ್ನು ನಾವು ಭರಿಸುತ್ತೇವೆ. ಜೊತೆಗೆ ರಾಜ್ಯಗಳು ಉಳಿದ 4% ಬಡ್ಡಿಯನ್ನು ಭರಿಸುತ್ತವೆ. ಉತ್ತರಪ್ರದೇಶದಲ್ಲಿ ಸರ್ಕಾರ ರಚನೆಯಾದ್ರೆ ರೈತರ ಸಾಲ ಮ್ನನಾ ಮಾಡುವುದಾಗಿ ಹೇಳಿದ್ದೆವು. ಕೇಂದ್ರ ಸರ್ಕಾರ ಇದರ ಭಾರವನ್ನ ಭರಿಸಲಿದೆ ಎಂದು ಹೇಳಿದ್ರು.

ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಒಂದು ವೇಳೆ ಅಧಿಕಾರಕ್ಕೆ ಬಂದರೆ ರೈತರ ಸಾಲ ಮನ್ನಾ ಮಾಡುವುದಾಗಿ ಬಿಜೆಪಿ ವಾಗ್ದಾನ ನೀಡಿತ್ತು. ಈಗ ಬಿಜೆಪಿ ಮೈತ್ರಿಕೂಟ 325 ಶಾಸಕರೊಂದಿಗೆ ಚುಕ್ಕಾಣಿಗೇರಿದೆ.

ಆದ್ರೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೇವಲ ಒಂದು ರಾಜ್ಯದಲ್ಲಷ್ಟೇ ಅಲ್ಲ ದೇಶದಾದ್ಯಂತ ರೈತರ ಸಾಲ ಮನ್ನಾ ಮಾಡಬೇಕು ಎಂದು ಚೌಟಾಲ ಹೇಳಿದ್ದಾರೆ.

Advertisement
Advertisement