ನವದೆಹಲಿ: ಆ.1 ರಿಂದ ಯುಪಿಐ ನಿಯಮಗಳಲ್ಲಿ ಮಹತ್ವದ ಬದಲಾವಣೆಗಳು ಜಾರಿಗೆ ಬರಲಿವೆ.
ಗೂಗಲ್ ಪೇ, ಪೇಟಿಎಂ ಫೋನ್ ಪೇ ನಂತಹ ಯುಪಿಐ ಅಪ್ಲಿಕೇಶನ್‌ಗಳು ಕಾರ್ಯನಿರ್ವಹಿಸುವುದಕ್ಕೆ ಸಂಬಂಧಿಸಿದಂತೆ ನಿಯಮಗಳಲ್ಲಿ ಆಗಸ್ಟ್ 1 ರಿಂದ ಹಲವಾರು ಬದಲಾವಣೆಗಳನ್ನು ಜಾರಿಗೆ ತರಲು ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ ಸಜ್ಜಾಗಿದೆ.
ಡಿಜಿಟಲ್ ಹಣ ಪಾವತಿ ವ್ಯವಸ್ಥೆ ಯುಪಿಐನ ದಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಹಲವು ಬದಲಾವಣೆಗಳನ್ನು ಜಾರಿಗೆ ತರಲಾಗುತ್ತಿದೆ. ದಿನಕ್ಕೆ ಹಲವಾರು ಬಾರಿ UPI ಅಪ್ಲಿಕೇಶನ್‌ಗಳನ್ನು ಬಳಸುವ ಗ್ರಾಹಕರಿಗೆ, ಈ ನಿಯಮಗಳು ಮಹತ್ವದ್ದಾಗಿವೆ.
ಏನೇನು ಬದಲಾವಣೆ?
* ಒಂದು ದಿನದಲ್ಲಿ ಬಳಕೆದಾರರು 50 ಬಾರಿ ಮಾತ್ರ ಯುಪಿಐ ಅಪ್ಲಿಕೇಷನ್ ಮೂಲಕ ಖಾತೆಯಲ್ಲಿರುವ ಬಾಕಿ ಹಣ ಪರಿಶೀಲಿಸಬಹುದು.
* ದಿನಕ್ಕೆ 25 ಬಾರಿ ಮಾತ್ರ ಮೊಬೈಲ್ ಸಂಖ್ಯೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆ ಮಾಹಿತಿಯನ್ನು ಬಳಕೆದಾರರು ಪಡೆಯಬಹುದು.
* ಇಎಂಐ, ಒಟಿಟಿ, ನೆಟ್‌ಫ್ಲಿಕ್ಸ್, ಸ್ಪಾಟಿಪೈ, ಮ್ಯೂಚುವಲ್ ಫಂಡ್ಸ್.. ಮೊದಲಾದ ಪೇಮೆಂಟ್‌ಗಳನ್ನು ಆಟೋ ಮೋಡ್‌ನಲ್ಲಿ ಇಡಲಾಗುತ್ತದೆ. ಅಂದರೆ, ಅವಧಿ ಮುಗಿದ ಮೇಲೆ ಖಾತೆಯಿಂದ ತಾನಾಗಿಯೇ ಹಣ ಪಾವತಿಯಾಗುತ್ತದೆ. ಬೆಳಗ್ಗೆ 10ರ ಒಳಗೆ, ಮಧ್ಯಾಹ್ನ 1-5 ಗಂಟೆ ಒಳಗೆ, ರಾತ್ರಿ 9:30ರ ನಂತರ ಪಾವತಿಯಾಗಲಿದೆ.
* ಹಣ ಪಾವತಿಸುವಾಗ ವಹಿವಾಟು ಬಾಕಿಯಾದರೆ, ಬಳಕೆದಾರರು ಅದನ್ನು ಮೂರು ಬಾರಿ ಮಾತ್ರ ಪರಿಶೀಲಿಸಬಹುದು. ಪ್ರತಿ ಪರಿಶೀಲನೆಗೆ 90 ಸೆಕೆಂಡುಗಳ ಅಂತರವಿರುತ್ತದೆ.
* ಬಳಕೆದಾರರು ಪ್ರತಿ ಬಾರಿ UPI ಮೂಲಕ ಹಣವನ್ನು ಕಳುಹಿಸಿದಾಗ, ವಹಿವಾಟು ನಡೆಸುವ ಮೊದಲು ಹಣ ಸ್ವೀಕರಿಸುವವರ ನೋಂದಾಯಿತ ಹೆಸರನ್ನು ನೋಡಲು ಸಾಧ್ಯವಾಗುತ್ತದೆ.
ಈ ಬದಲಾವಣೆಗಳು ಪ್ರಮುಖವಲ್ಲದಿದ್ದರೂ, ತುರ್ತು ಸಂದರ್ಭದಲ್ಲಿ UPI ಅಪ್ಲಿಕೇಶನ್‌ಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡಲು, ಆನ್‌ಲೈನ್ ಪಾವತಿಗಳ ದಕ್ಷತೆ ಹೆಚ್ಚಿಸಲು ಸಹಕಾರಿಯಾಗಿದೆ.