ರಾಯಚೂರು: ರಾಜ್ಯಾದ್ಯಂತ ಭಾರೀ ಸಂಚಲನ ಸೃಷ್ಟಿಸಿದ್ದ ರಾಯಚೂರು ಎಂಜಿನಿಯರಿಂಗ್ ವಿದ್ಯಾರ್ಥಿನಿ ನಿಗೂಢ ಸಾವು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ.
ವಿದ್ಯಾರ್ಥಿನಿಯನ್ನು ಕೊಲೆ ಮಾಡಿಲ್ಲ. ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಸಿಐಡಿ ಮೂಲಗಳು ತಿಳಿಸಿವೆ. ಆರೋಪಿ ಸುದರ್ಶನ್ ಯಾದವ್ ಹೇಳಿಕೆಗಳ ಆಧಾರದ ಮೇಲೆ ಪ್ರಕರಣವನ್ನು ಆತ್ಮಹತ್ಯೆ ಎಂದು ಸಿಐಡಿ ಪರಿಗಣಿಸಿದೆ. ಇದನ್ನೂ ಓದಿ: ರಾಯಚೂರು ವಿದ್ಯಾರ್ಥಿನಿ ಸಾವು – ತನಿಖೆ ವೇಳೆ ಮಹತ್ವದ ಸಾಕ್ಷ್ಯ ಲಭ್ಯ
ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಳು ಅಧಿಕೃತವಾಗಿ ಪ್ರಕಟವಾಗದೇ ಇದ್ದರೂ ಸಿಐಡಿ ಮೂಲಗಳು ಆಕೆಯ ಮೇಲೆ ಅತ್ಯಾಚಾರವಾಗಿಲ್ಲ, ಇದು ಆತ್ಮಹತ್ಯೆ ಅಂತಲೇ ತಿಳಿಸಿವೆ. ಇದನ್ನೂ ಓದಿ: ಎಂಜಿನಿಯರಿಂಗ್ ವಿದ್ಯಾರ್ಥಿನಿ ಜೊತೆಗಿನ ಆರೋಪಿ ಫೋಟೋ ವೈರಲ್
ಸಿಐಡಿ ಕಸ್ಟಡಿಯಲ್ಲಿ ಒಂಭತ್ತು ದಿನಗಳ ಕಾಲ ವಿಚಾರಣೆಗೆ ಒಳಪಟ್ಟ ಸುದರ್ಶನ್ ಯಾದವ್ ಹಲವಾರು ವಿಚಾರಗಳನ್ನ ಬಾಯಿಬಿಟ್ಟಿದ್ದಾನೆ. ವಿದ್ಯಾರ್ಥಿನಿ ಜೊತೆಯಿದ್ದ ತಮ್ಮ ಸ್ನೇಹ ಸಂಬಂಧ ಹಾಗೂ ಜೊತೆಯಾಗಿ ಓಡಾಡಿದ್ದ, ತಂಗಿದ್ದ ಸ್ಥಳಗಳ ಬಗ್ಗೆಯೂ ಸಂಪೂರ್ಣ ಮಾಹಿತಿಯನ್ನು ನೀಡಿದ್ದ. ವಿದ್ಯಾರ್ಥಿನಿ ಮೇಲೆ ಸಂಶಯಪಟ್ಟು ಕಿರುಕುಳ ಸಹ ನೀಡಿದ್ದನು. ಇದರಿಂದ ಮನನೊಂದು ವಿದ್ಯಾರ್ಥಿನಿ ಸಾವಿನ ನಿರ್ಧಾರಕ್ಕೆ ಹೋಗಿರಬಹುದು ಎನ್ನಲಾಗಿದೆ.
ಸಂಗ್ರಹವಾದ ಸಾಕ್ಷಿಗಳ ಆಧಾರದ ಮೇಲೆ ಸಿಐಡಿ ಅಧಿಕಾರಿಗಳು ಪ್ರಕರಣವನ್ನ ಆತ್ಮಹತ್ಯೆ ಅನ್ನೋ ತೀರ್ಮಾನಕ್ಕೆ ಬಂದಿದ್ದಾರೆ. ಇನ್ನೂ ಮೇ 14ರ ವರೆಗೆ ನ್ಯಾಯಾಂಗ ಬಂಧನದಲ್ಲಿರುವ ಆರೋಪಿ ಸುದರ್ಶನ್ ಯಾದವ್ ಜಾಮೀನು ಮೇಲೆ ಹೊರಬರುವ ಸಾಧ್ಯತೆಗಳಿವೆ. ಸದ್ಯಕ್ಕೆ ಪೊಲೀಸರು ಆತ್ಮಹತ್ಯೆಗೆ ನಿಖರ ಕಾರಣ ಏನು ಎಂಬುವುದನ್ನು ತನಿಖೆ ನಡೆಸುತ್ತಿದ್ದಾರೆ.