-ಅಂದು ಅಂಬಿಕಾ, ಇಂದು ಲಕ್ಷ್ಮಿ!
ಚಿಕ್ಕಬಳ್ಳಾಪುರ: ಚಾಮರಾಜನಗರದ ಸುಳ್ವಾಡಿಯ ಮಾರಮ್ಮ ದೇವಿ ವಿಷ ಪ್ರಸಾದ ಮಾಸುವ ಮುನ್ನವೇ ಚಿಂತಾಮಣಿ ಗಂಗಮ್ಮ ಗುಡಿ ಪ್ರಸಾದ ದುರಂತ ನಡೆದು ಹೋಯಿತು. ಪ್ರಕರಣದ ಪೊಲೀಸರ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ಪ್ರಸಾದ ತಯಾರಿಸಿ ಹಂಚಿದ ಲಕ್ಷ್ಮಿಯೇ ವಿಷಕನ್ಯೆ ಅನ್ನೋ ಅಘಾತಕಾರಿ ಅಂಶ ಬಲವಾಗುತ್ತಿದೆ. ತನ್ನ ಅನೈತಿಕ ಸಂಬಂಧ ಉಳಿಸಿಕೊಳ್ಳೊಕೆ ಪ್ರಿಯಕರನನ್ನ ಪಡೆದುಕೊಳ್ಳೋಕೆ ಲಕ್ಷ್ಮಿಯೇ ವಿಷಪ್ರಸಾದದ ಪ್ಲಾನ್ ರೂಪಿಸಿದ್ದಾಳಾ ಅನ್ನೋ ಅನುಮಾನ ವ್ಯಕ್ತವಾಗಿದೆ.
ಸುಳ್ವಾಡಿ ವಿಷ ಪ್ರಸಾದವೇ ಸ್ಫೂರ್ತಿ ಎಂಬಂತೆ ಪ್ರಸಾದ ತಯಾರಿಸಿ ಹಂಚಿಸಿದ್ದ ಲಕ್ಷ್ಮಿ ವಿರುದ್ಧ ಅನೈತಿಕ ಸಂಬಂಧದ ಗಂಭೀರ ಆರೋಪ ಕೇಳಿ ಬಂದಿದೆ. ಚಿಂತಾಮಣಿ ಗಂಗಮ್ಮ ಗುಡಿ ಪ್ರಸಾದ ದುರಂತ ಪ್ರಕರಣದಲ್ಲಿ ಪ್ರಸಾದವೇ ವಿಷವಾಯ್ತಾ, ಇಲ್ಲ. ಪ್ರಸಾದದಲ್ಲೇ ಉದ್ದೇಶಪೂರ್ವಕವಾಗಿಯೇ ವಿಷ ಬೆರೆಸಲಾಯ್ತಾ..? ಅನ್ನೋ ಪ್ರಶ್ನೆಗೆ ಉತ್ತರ ಸಿಗುತ್ತಿದೆ. ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದ ಪೊಲೀಸರಿಗೆ ಅನೈತಿಕ ಸಂಬಂಧದ ವಾಸನೆ ಮೂಗಿಗೆ ಬಡಿದಿದೆ.
Advertisement
Advertisement
ಗಂಗಮ್ಮನ ದೇಗುಲದಲ್ಲಿ ಅಮರವಾತಿ ಮೂಲಕ ಪ್ರಸಾದ ಹಂಚಿಸಿದ್ದ ಲಕ್ಷ್ಮಿಯೇ ವಿಷ ಕನ್ಯೆ ಎಂಬ ಅನುಮಾನ ದೃಢವಾಗ್ತಿದೆ. ಅಸಲಿಗೆ ಗಂಗಮ್ಮ ಗುಡಿ ಎದುರು ಮನೆಯ ಲಕ್ಷ್ಮಿಗೆ ಹಾಗೂ ದೇವಾಲಯದ ಪಕ್ಕದ ಮನೆಯ ಲೋಕೇಶ್ ಎಂಬಾತನೊಂದಿಗೆ ಅಕ್ರಮ ಸಂಬಂಧವಿತ್ತಂತೆ. ಆದ್ರೂ ಲೋಕೇಶ್ ಎರಡೂವರೆ ವರ್ಷದ ಹಿಂದೆ ಗೌರಿಯನ್ನ ಮದುವೆಯಾಗಿದ್ದ. ಮದುವೆ ನಂತರ ಲೋಕೇಶ್ ಲಕ್ಷ್ಮಿ ಸಂಬಂಧ ಗೌರಿಗೆ ಗೊತ್ತಾಗಿ ದೊಡ್ಡ ಜಗಳವೇ ನಡೆದಿತ್ತು. ಹೀಗಾಗಿ ಮೂರೂವರೆ ತಿಂಗಳ ಹಿಂದೆ ಲೋಕೇಶ್ ಮನೆ ಬಿಟ್ಟು ಚಿಂತಾಮಣಿಯಿಂದಲೇ ನಾಪತ್ತೆಯಾಗಿದ್ದಾನೆ. ಇದು ಲಕ್ಷ್ಮಿಗೆ ಅರಗಿಸಿಕೊಳ್ಳಲಾಗಿಲ್ಲ. ಲೋಕೇಶ್ ಪತ್ನಿಯಾದ ನನ್ನನ್ನು ಮುಗಿಸಿಬಿಟ್ರೇ ತನ್ನ ಅನೈತಿಕ ಸಂಬಂಧದ ಹಾದಿ ಸುಗಮವಾಗುತ್ತೆ ಅಂತ ಲಕ್ಷ್ಮಿ ಈ ಸಂಚು ರೂಪಿಸರಬಹುದು ಎಂದು ಗೌರಿ ಆರೋಪಿಸುತ್ತಾರೆ.
Advertisement
Advertisement
ಗೌರಿ ಕೊಲೆಗೆ ಲಕ್ಷ್ಮಿ ಸ್ಕೆಚ್!
ಈ ಗೌರಿ ಬೇರೆ ಯಾರು ಅಲ್ಲ, ವಿಷ ದುರಂತದಲ್ಲಿ ಸಾವನ್ನಪ್ಪಿದ ಸರಸ್ವತಮ್ಮನ ಪುತ್ರ್ರಿ. ಗೌರಿ ಮೇಲೆ ಹತ್ಯಾ ಪ್ರಯತ್ನ ನಡೆಯುತ್ತಿರೋದು ಎರಡನೇ ಬಾರಿ ಎಂಬ ಮಾಹಿತಿ ಲಭ್ಯವಾಗುತ್ತಿವೆ. ಈ ಬಾರಿ ಪ್ರಸಾದಕ್ಕೆ ಬಂಗಾರಕ್ಕೆ ಬಳಸಲಾಗುವ ಸೈನೆಡ್ ಬಳಸಿದ್ಲು ಅನ್ನೋ ಸ್ಫೋಟಕ ಅಂಶ ಬಯಲಾಗಿದೆ. ಈ ಹಿಂದೆಯೂ ಗೌರಿ ಹತ್ಯೆಗೆ ಲಕ್ಷ್ಮಿ ಪ್ರಸಾದದಲ್ಲಿ ವಿಷ ಬೆರೆಸಿದ್ಳು, ಇದು ಗೊತ್ತಿಲ್ಲದೇ ತಿಂದ ಗೌರಿ, ತೀವ್ರ ವಾಂತಿಯಿಂದ ಆಸ್ಪತ್ರೆ ಸೇರಿದ್ದರು. ಇದರಿಂದ ಗಂಗಮ್ಮನ ಗುಡಿಗೆ ಹೋಗಿದ್ರೂ ಪ್ರಸಾದ ತಿನ್ನದೇ, ತನ್ನ ತಾಯಿಗೆ ಅಂತ ಸ್ವಲ್ಪ ತಂದಿದ್ದರಂತೆ. ಇದನ್ನು ತಿಂದ ಸರಸ್ವತಮ್ಮ ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಕೂಡಲೇ ತಾಯಿಯನ್ನ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.
ಇಷ್ಟೆಲ್ಲಾ ಅನೈತಿಕ ಸಂಬಂಧದ ಕಹಾನಿ ತಿಳಿದುಕೊಂಡಿರೋ ಪೊಲೀಸರು ಗೌರಿ ಹೇಳಿಕೆ ದಾಖಲಿಸಿಕೊಂಡು ತನಿಖೆ ತೀವ್ರಗೊಳಿಸಿದ್ದಾರೆ. ಲಕ್ಷ್ಮಿ ಪತಿ ಮಂಜುನಾಥ್, ಲೋಕೇಶ್ ಸಂಬಂಧಿ ಚೊಕ್ಕಹಳ್ಳಿ ರವಿಯನ್ನ ವಶಕ್ಕೆ ಪಡೆದ ಪೊಲೀಸರು ನಾಪತ್ತೆಯಾಗಿರೊ ಲೋಕೇಶ್‍ಗಾಗಿ ಶೋಧ ಆರಂಭಿಸಿದ್ದಾರೆ. ಈ ನಡುವೆ ಗೌರಿ ತಂದೆ ಶಿವಪ್ಪ, ಪ್ರಸಾದದದಲ್ಲಿ ವಿಷ ಬೆರೆಸಿ ಇಬ್ಬರ ಸಾವಿಗೆ ಕಾರಣಲಾದ ಲಕ್ಷ್ಮಿಗೆ ತಕ್ಕ ಶಾಸ್ತಿ ಆಗಬೇಕು ಅಂತ ಆಗ್ರಹಿಸಿದ್ದಾರೆ.
ಸದ್ಯ ಎಫ್ ಎಸ್ ಎಲ್ ರಿಪೋರ್ಟ್ ಸಹ ಪೊಲೀಸರ ಕೈ ಸೇರಿದೆ. ಪೊಲೀಸರ ವಶದಲ್ಲಿರೋ ವಿಷ ಕನ್ಯೆ ಸಹ ತನ್ನ ತಪ್ಪು ಒಪ್ಪಿಕೊಂಡಿದ್ದಾಳೆ ಎನ್ನಲಾಗ್ತಿದೆ. ಈ ವಿಚಾರವಾಗಿ ಚಿಕ್ಕಬಳ್ಳಾಪುರ ಎಸ್ಪಿ ಇಂದು ಮಹತ್ವದ ಸುದ್ದಿಗೋಷ್ಟಿ ನಡೆಸೋ ಸಾಧ್ಯತೆ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv