ಬೆಂಗಳೂರು: ಬೌರಿಂಗ್ ಇನ್ಸ್ಟಿಟ್ಯೂಟ್ ನಲ್ಲಿ ಕೋಟಿ ಕೋಟಿ ಹಣ ಪತ್ತೆ ಪ್ರಕರಣಕ್ಕೆ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಈಗ ಉದ್ಯಮಿ ಅಮರ್ ಲಾಲ್ ಬೆನ್ನಿಗೆ ರಾಜಕಾರಣಿಗಳು ನಿಂತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಅವಿನಾಶ್ ಅಮರ್ ಲಾಲ್ ಬೆನ್ನಿಗೆ ದೆಹಲಿ ಬಿಜೆಪಿ ಪರಮೋಚ್ಚ ನಾಯಕ ನಿಂತಿದ್ದು, ತನಿಖೆಗೆ ಅಡ್ಡಿಪಡಿಸಲು ಒತ್ತಾಯ ಹೆಚ್ಚಾಗಿದೆಯಂತೆ. ಆದ್ದರಿಂದ ಐಟಿ ಇಲಾಖೆಯೂ ತನಿಖೆ ನಡೆಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ. ಅಮರ್ ಲಾಲ್ ನನ್ನು ಸದ್ಯಕ್ಕೆ ತನಿಖೆ ಮಾಡಬಾರದು. ವಿಚಾರಣೆಯನ್ನು ಸ್ವಲ್ಪ ನಿಧಾನ ಮಾಡಿ ಎಂದು ಐಟಿ ಅಧಿಕಾರಿಗಳಿಗೆ ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ಬೆಂಗ್ಳೂರಿನ ಬೌರಿಂಗ್ ಇನ್ಸ್ ಸ್ಟಿಟ್ಯೂಟ್ ಒಳಗೆ ಸಿಕ್ತು ಕೋಟಿ ಕೋಟಿ ನಿಧಿ
ಐಟಿ ಅಮರ್ ಲಾಲ್ ಗೆ ನೋಟೀಸ್ ಒಂದನ್ನು ನೀಡಿ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಅತ್ತ ಜಾರಿ ನಿರ್ದೇಶನಾಲಯದಿಂದಲೂ ಎಫ್‍ಐಆರ್ ದಾಖಲು ಮಾಡಲು ಮೀನಾಮೇಷ ನಡೆಯುತ್ತಿದೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲದೇ ವಿದೇಶಿ ಕರೆನ್ಸಿ ಪತ್ತೆಯಾದರೂ ಕೂಡ ಐಟಿ ಅಧಿಕಾರಿಗಳು ಲಿಮಿಟ್ಸ್ ಬಗ್ಗೆ ತನಿಖೆ ನಡೆಸಿಲ್ಲ. ಆದ್ದರಿಂದ ಅವಿನಾಶ್ ಅಮರ್ ಲಾಲ್ ಪ್ರಕರಣದಲ್ಲೀಗ ಅನುಮಾನದ ಹುತ್ತ ಬೆಳೆಯುತ್ತಿದೆ.
ಸದ್ಯಕ್ಕೆ ಅವಿನಾಶ್ ಅಮರ್‍ಲಾಲ್ ಇಂದು ಐಟಿ ಮುಂದೆ ಹಾಜರಾಗುವ ಸಾಧ್ಯತೆ ಇದ್ದು, ಐಟಿ ಅಧಿಕಾರಿಗಳು ಶನಿವಾರ ನೋಟಿಸ್ ನೀಡಿ 5 ದಿನಗಳ ಗಡುವು ನೀಡಲಾಗಿತ್ತು. ಆದ್ದರಿಂದ ಅವಿನಾಶ್ ಅಮರ್‍ಲಾಲ್ ಇಂದು ವಿಚಾರಣೆ ಹಾಜರಾಗುವ ಸಾಧ್ಯತೆ ಇದೆ.
ಅವಿನಾಶ್ ಅಮರ್ ಲಾಲ್ ಲಾಕರ್‍ನಲ್ಲಿ 3.90 ಕೋಟಿ ನಗದು 10 ಕೋಟಿ ವಜ್ರಾಭರಣ, ನೂರಾರು ಕೋಟಿ ಮೌಲ್ಯದ ಆಸ್ತಿ ಪತ್ರ ಪತ್ತೆಯಾಗಿತ್ತು. ಇದರಿಂದ ಆರೋಪಿ ಉದ್ಯಮಿ ಅವಿನಾಶ್ ಅಮರ್ ಲಾಲ್ ಕುಕ್ರೇಜ ಸದಸ್ಯತ್ವ ರದ್ದಾಗುವ ಸಾಧ್ಯತೆ ಇದೆ. ಇಂದು ಸಂಜೆ 4 ಗಂಟೆಗೆ ಆಡಳಿತ ಮಂಡಳಿ ಈ ಬಗ್ಗೆ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳುತ್ತದೆ.