ಲಕ್ನೋ: ಲೈಂಗಿಕ ಅಲ್ಪಸಂಖ್ಯಾತರಿಗಾಗಿ ಉತ್ತರ ಪ್ರದೇಶದ ಖುಷಿನಗರ್ ಜಿಲ್ಲೆಯ ಫಜೀಲ್ ನಗರದಲ್ಲಿ ವಿಶ್ವವಿದ್ಯಾಲಯ ಪ್ರಾರಂಭವಾಗಲಿದೆ.
ಒಂದನೇ ತರಗತಿಯಿಂದ ಉನ್ನತ ವ್ಯಾಸಂಗದವರೆಗೂ ಪ್ರಪ್ರಥಮವಾಗಿ ವಿವಿ ಪ್ರಾರಂಭವಾಗಲಿದ್ದು, ಅಲ್ ಇಂಡಿಯಾ ಟ್ರಾನ್ಸ್ ಜೆಂಡರ್ಸ್ ಎಜುಕೇಷನ್ ಸರ್ವಿಸ್ ಟ್ರಸ್ಟ್ ಈ ವಿವಿ ಪ್ರಾರಂಭ ಮಾಡುತ್ತಿದೆ.
2020 ಜನವರಿ 15ಕ್ಕೆ ಲೈಂಗಿಕ ಅಲ್ಪ ಸಂಖ್ಯಾತ ಸಮುದಾಯದಲ್ಲಿ ಬೆಳೆದ ಇಬ್ಬರ ದಾಖಲಾತಿ ನಡೆಯಲಿದೆ. ಫೆಬ್ರವರಿ, ಮಾರ್ಚ್ ವೇಳೆಗೆ ಎಲ್ಲ ತರಗತಿಗಳು ಪ್ರಾರಂಭವಾಗಲಿವೆ. ಉನ್ನತ ವ್ಯಾಸಂಗ ಮುಗಿಸಿ ಪಿಎಚ್‍ಡಿ ರಿಸರ್ಚ್ ಮಾಡಿ ಡಾಕ್ಟರೇಟ್ ಸಹ ಪಡೆಯಬಹುದಾಗಿದೆ. ಶಿಕ್ಷಣ ಮುಗಿಸಿ ತಮ್ಮ ಸಮುದಾಯಕ್ಕೆ ಹೊಸ ದಾರಿಯನ್ನು ಹಾಕಿಕೊಡಲಿದ್ದಾರೆ ಎಂದು ಟ್ರಸ್ಟ್ ಹೇಳಿದೆ.
ಈ ಬೃಹತ್ ಯೋಜನೆಗೆ ದೇಶದ ಲೈಂಗಿಕ ಅಲ್ಪಸಂಖ್ಯಾತರು ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಶಿಕ್ಷಣ ಪಡೆದು ಸಮಾಜದಲ್ಲಿ ಗೌರವವನ್ನು ಹೆಚ್ಚು ಮಾಡಿಕೊಳ್ಳಲಿದ್ದೇವೆ ಎನ್ನುವ ಮನಸ್ಥಿತಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರಿದ್ದಾರೆ. ಒಬ್ಬರು ಶಿಕ್ಷಿತರಾದರೆ ಹಲವರನ್ನು ಶಿಕ್ಷಣದ ಕಡೆ ಸೆಳೆಯಬಹುದು. ಇದರಿಂದ ಸಮುದಾಯದ ಅಭಿವೃದ್ಧಿ ಆಗುತ್ತದೆ ಎನ್ನುವ ಆಲೋಚನೆಯನ್ನಿಟ್ಟುಕೊಂಡು ಟ್ರಸ್ಟ್ ಈ ವಿವಿಯನ್ನು ಆರಂಭಿಸುತ್ತಿದೆ.