ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹಕ್ಕೆ (Toll Collection) ಸಂಬಂಧಿಸಿದಂತೆ ಸರ್ಕಾರ ಶೀಘ್ರದಲ್ಲೇ ಹೊಸ ನೀತಿಯನ್ನು ಪ್ರಕಟಿಸಲಿದ್ದು, ಗ್ರಾಹಕರಿಗೆ ಸೂಕ್ತ ರಿಯಾಯಿತಿಯನ್ನು ನೀಡಲಿದ್ದೇವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ಬುಧವಾರ ಹೇಳಿದ್ದಾರೆ.
ರಾಜ್ಯಸಭೆಯಲ್ಲಿ (Rajya Sabha) ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಸರ್ಕಾರವು ರಸ್ತೆ ಮೂಲಸೌಕರ್ಯ ನಿರ್ಮಾಣಕ್ಕೆ ಸಾಕಷ್ಟು ಖರ್ಚು ಮಾಡುತ್ತಿದೆ. ಆದ್ದರಿಂದ ಟೋಲ್ ಸಂಗ್ರಹ ಅಗತ್ಯ. ಉತ್ತಮ ರಸ್ತೆ ಬೇಕಾದರೆ, ನೀವು ಅದಕ್ಕೆ ಹಣ ಪಾವತಿಸಬೇಕು ಎಂಬುದು ಇಲಾಖೆಯ ನೀತಿ ಎಂದು ಪ್ರತಿಪಾದಿಸಿದರು. ಇದನ್ನೂ ಓದಿ: ಡಿಕೆಶಿ ಕನಸಿಗೆ ತಣ್ಣೀರೆರಚಿದ ಕೇಂದ್ರ ಸರ್ಕಾರ – ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣಕ್ಕೆ ಕೇಂದ್ರ ತಡೆ
ಅಸ್ಸಾಂನಲ್ಲಿ ರಸ್ತೆಗಳಿಗೆ ಸರ್ಕಾರ 3 ಲಕ್ಷ ಕೋಟಿ ರೂ. ಖರ್ಚು ಮಾಡಲು ಯೋಜಿಸಿದೆ. ನಾವು ಬಹಳಷ್ಟು ದೊಡ್ಡ ರಸ್ತೆಗಳು, ನಾಲ್ಕು ಪಥಗಳು, ಆರು ಪಥಗಳನ್ನು ನಿರ್ಮಿಸುತ್ತಿದ್ದೇವೆ. ಬ್ರಹ್ಮಪುತ್ರ ನದಿಗೆ ಸೇತುವೆಗಳನ್ನು ನಿರ್ಮಿಸುತ್ತಿದ್ದೇವೆ. ಆದ್ದರಿಂದ ಟೋಲ್ ಇಲ್ಲದೆ ರಸ್ತೆ ನಿರ್ಮಾಣ ಸಾಧ್ಯವಿಲ್ಲ. ಈ ವಿಚಾರದಲ್ಲಿ ಉದಾರವಾಗಿ ಚಿಂತಿಸಿ, ನಾಲ್ಕು ಪಥಗಳಲ್ಲಿ ಮಾತ್ರ ಟೋಲ್ ವಿಧಿಸುತ್ತಿದ್ದೇವೆ. ಎರಡು ಪಥಗಳ ಸುಸಜ್ಜಿತ ರಸ್ತೆಗಳಲ್ಲಿ ಯಾವುದೇ ಶುಲ್ಕ ವಿಧಿಸಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ನಾಗ್ಪುರ ಹಿಂಸಾಚಾರ – ಮಾಸ್ಟರ್‌ಮೈಂಡ್ ಫಹೀಮ್ ಖಾನ್ ಬಂಧನ
2008ರ ನಿಯಮಗಳ ಪ್ರಕಾರ, ರಾಷ್ಟ್ರೀಯ ಹೆದ್ದಾರಿಯ ಒಂದೇ ವಿಭಾಗದಲ್ಲಿ ಮತ್ತು ಒಂದೇ ದಿಕ್ಕಿನಲ್ಲಿ ಟೋಲ್ ಪ್ಲಾಜಾವನ್ನು 60 ಕಿಲೋಮೀಟರ್ ಒಳಗೆ ಸ್ಥಾಪಿಸಲು ಸಾಧ್ಯವಿಲ್ಲ. ಈ ಅಧಿವೇಶನ ಮುಗಿದ ನಂತರ, ನಾವು ಟೋಲ್‌ಗಾಗಿ ಹೊಸ ನೀತಿಯನ್ನು ಘೋಷಿಸಲಿದ್ದೇವೆ, ಅಲ್ಲಿ ಸಮಸ್ಯೆ ಬಗೆಹರಿಯುತ್ತದೆ. ಅಲ್ಲದೇ ಗ್ರಾಹಕರಿಗೆ ಸೂಕ್ತ ರಿಯಾಯಿತಿಯನ್ನು ನೀಡುತ್ತೇವೆ ಎಂದರು. ಇದನ್ನೂ ಓದಿ: ಧರ್ಮದ ಆಧಾರದಲ್ಲಿ ಶೇ.4ರಷ್ಟು ಹೊಸ ಮೀಸಲಾತಿ ನೀಡುವುದು ಕಾನೂನುಬಾಹಿರ – ಬಿಜೆಪಿ ವಿರೋಧ