ನವದೆಹಲಿ: ಸಾಕಷ್ಟು ದಿನಗಳಿಂದ 200 ರೂಪಾಯಿ ನೋಟು ಸುದ್ದಿಯಲ್ಲಿತ್ತು. ಗಣೇಶ ಹಬ್ಬದ ದಿನವಾದ ಇಂದು 200 ರುಪಾಯಿ ಮುಖಬೆಲೆಯ ಹೊಸ ನೋಟುಗಳು ಬ್ಯಾಂಕ್‍ಗಳಿಗೆ ಪೂರೈಕೆ ಆಗಲಿದೆ.
ಆರಂಭದಲ್ಲಿ ಆಯ್ದ ಆರ್‍ಬಿಐ ಕಚೇರಿ ಹಾಗೂ ಕೆಲವು ಬ್ಯಾಂಕ್‍ಗಳಲ್ಲಿ ಮಾತ್ರ ಹೊಸ 200 ರೂ. ನೋಟು ವಿತರಣೆಯಾಗಲಿದೆ.
ಇಂದಿನಿಂದ 3 ದಿನ ಸರ್ಕಾರಿ ರಜೆ ಇದ್ದು, ಸೋಮವಾರದಿಂದ ಹೊಸ ನೋಟು ಸಿಗಲಿದೆ. ಇದ್ರಿಂದ ಚಿಲ್ಲರೆ ಸಮಸ್ಯೆ ಬಗೆಹರಿಯಲಿದೆ ಅಂತ ಆರ್‍ಬಿಐ ಹೇಳಿದೆ.
200ರ ನೋಟು ಕಡು ಹಳದಿ ಬಣ್ಣದಲ್ಲಿದೆ. ನೋಟಿನ ಹಿಂಭಾಗದಲ್ಲಿ ಸಾಂಚಿ ಸ್ತೂಪದ ಚಿತ್ರವಿದೆ. ದೇವನಾಗರಿಯಲ್ಲಿ 200 ರೂ. ನ ಮುದ್ರಣ, ಮಧ್ಯಭಾಗದಲ್ಲಿ ಮಹಾತ್ಮಾ ಗಾಂಧೀಜಿಯ ಚಿತ್ರವಿದೆ. ಮೈಕ್ರೋ ಲಿಪಿಯಲ್ಲಿ ಆರ್‍ಬಿಐ, ಭಾರತ್, ಇಂಡಿಯಾ ಹಾಗೂ 200 ಮುದ್ರಣವಿದೆ. ಬಣ್ಣ ಬದಲಾಗುವಂತಹ ಸೆಕ್ಯೂರಿಟಿ ಥ್ರೆಡ್ ಇದ್ದು ಅದರ ಮೇಲೆ ಭಾರತ್ ಹಾಗೂ ಆರ್‍ಬಿಐ ಮುದ್ರಣವಿದೆ. ನೋಟನ್ನ ಸ್ವಲ್ಪ ತಿರುಗಿಸಿ ನೋಡಿದ್ರೆ ಈ ಥ್ರೆಡ್‍ನ ಬಣ್ಣ ಹಸಿರಿನಿಂದ ನೀಲಿ ಬಣ್ಣಕ್ಕೆ ತಿರುಗುತ್ತದೆ.
ನೋಟಿನ ಬಲಭಾಗದಲ್ಲಿ ಅಶೋಕ ಸ್ತಂಭ, 200 ರ ವಾಟರ್‍ಮಾರ್ಕ್ ಇದೆ. ನೋಟಿನ ಮೇಲ್ಭಾಗದ ಎಡಗಡೆ ಹಾಗೂ ಕೆಳಭಾಗದ ಬಲಗಡೆಯಲ್ಲಿ ನಂಬರ್ ಪ್ಯಾನಲ್ ಇದ್ದು, ನಂಬರ್‍ಗಳು ಸಣ್ಣದರಿಂದ ದೊಡ್ಡ ಗಾತ್ರಕ್ಕೆ ಮುದ್ರಣವಾಗಿರಲಿದೆ. ಅಂಧರಿಗೆ ಅನುಕೂಲವಾಗುವಂತೆ ಮಹಾತ್ಮಾ ಗಾಂಧಿ ಹಾಗೂ ಅಶೋಕ ಸ್ತಂಭದ ಉಬ್ಬಿದ ಮುದ್ರಣವಿದೆ. ‘ಹೆಚ್’ ಅಕ್ಷರದ ಉಬ್ಬಿದ ಗುರುತು ಇದೆ. ಎಡ ಹಾಗೂ ಬಲ ಭಾಗದಲ್ಲಿ ಆಂಗುಲರ್ ಬ್ಲೀಡ್ ಲೈನ್‍ಗಳಿದ್ದು, ಲೈನ್‍ಗಳ ಮಧ್ಯೆ ಎರಡು ವೃತ್ತಗಳಿವೆ. ನೋಟಿನ ಹಿಂಭಾಗದಲ್ಲಿ ಮುದ್ರಣದ ವರ್ಷ ಹಾಗೂ ಸ್ವಚ್ಛ ಭಾರತ ಲಾಂಛನವಿದೆ. ಅಲ್ಲದೆ ನೋಟಿನ ಬಣ್ಣಕ್ಕೆ ಹೊಂದಿಕೊಳ್ಳುವಂತೆ ಜಾಮಿಟ್ರಿಕ್ ಪ್ಯಾಟ್ರನ್ ಹಾಗೂ ಇತರೆ ಡಿಸೈನ್‍ಗಳಿವೆ. ನೋಟಿನ ಮೇಲೆ ಆರ್‍ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರ ಸಹಿ ಇದೆ.
ಶೀಘ್ರದಲ್ಲೇ ಹೊಸ ವಿನ್ಯಾಸದ 50 ರೂ. ನೋಟು ಕೂಡ ಬಿಡುಗಡೆಯಾಗಲಿದೆ. ಹೊಸ 50 ರೂ. ನೋಟಿನಲ್ಲಿ ವಿಶ್ವವಿಖ್ಯಾತ ಹಂಪಿಯ ಚಿತ್ರವಿರಲಿದೆ.