ಬೆಂಗಳೂರು: 84 ವರ್ಷದ ಇತಿಹಾಸವಿರುವ ಇರುವ ಸ್ಯಾಂಡಲ್‍ವುಡ್‍ನಲ್ಲಿ ಈ ಶುಕ್ರವಾರ ದಾಖಲೆ ನಿರ್ಮಾಣವಾಗಲಿದೆ. ಒಂದೇ ವರ್ಷದಲ್ಲಿ 200ಕ್ಕೂ ಅಧಿಕ ಸಿನಿಮಾಗಳನ್ನು ಬಿಡುಗಡೆ ಮಾಡಿದ ದಾಖಲೆಯನ್ನು ಕನ್ನಡ ಚಿತ್ರರಂಗ ಈ ವಾರ ಬರೆಯಲಿದೆ.
ಹೌದು. ಈ ಶುಕ್ರವಾರವೇ ಈ ದಾಖಲೆ ನಿರ್ಮಾಣವಾಗಲು ಕಾರಣವಿದೆ. ಈ ವಾರ ಬರೋಬ್ಬರಿ 10 ಚಿತ್ರಗಳು ಬಿಡುಗಡೆಯಾಗಲಿದೆ. ಒಟ್ಟು 10 ಚಿತ್ರಗಳು ಬಿಡುಗಡೆಯಾದರೆ ಒಂದೇ ವರ್ಷದಲ್ಲಿ 204 ಚಿತ್ರಗಳು ಬಿಡುಗಡೆಗೊಂಡು ಹೊಸ ಇತಿಹಾಸ ಸೃಷ್ಟಿಯಾಗಲಿದೆ.
2018ರ ವರ್ಷದಲ್ಲಿ ಇನ್ನೂ ಐದು ಶುಕ್ರವಾರಗಳು ಉಳಿದಿವೆ. ಹೀಗಾಗಿ ಈ ವರ್ಷ ಮತ್ತಷ್ಟು ಸಿನಿಮಾಗಳು ಬಿಡುಗಡೆಯಾಗುವ ಸಾಧ್ಯತೆಯಿದೆ. 2015 ರಲ್ಲಿ 136 ಚಲನಚಿತ್ರ ಬಿಡುಗಡೆಯಾಗಿದ್ದರೆ, 2016ರಲ್ಲಿ ಈ ಸಂಖ್ಯೆ 173ಕ್ಕೆ ಏರಿತ್ತು. 2017 ರಲ್ಲಿ ಅತಿ ಹೆಚ್ಚು 180 ಚಿತ್ರಗಳು ಬಿಡುಗಡೆಯಾಗಿತ್ತು.
ನವೆಂಬರ್ 23 ರಂದು, ‘ಕರ್ಷಣಂ’, ‘ವರ್ಣಮಯ’, ‘ಒಂದು ಸಣ್ಣ ಬ್ರೇಕ್ ನಂತರ’, ‘ಕಿಸ್ಮತ್’, ‘ಲೂಟಿ’, `ತಾರಕಾಸುರ’, ‘ರಾಹಿ’, ‘ನೀವ್ ಕರೆ ಮಾಡಿದ ಚಂದದಾರರು’ ಮತ್ತು ‘ಆಪಲ್ ಕೇಕ್’ ಸಿನಿಮಾಗಳು ಬಿಡುಗಡೆಯಾಗಲಿವೆ. ಇನ್ನೂ ಬಿಡುಗಡೆಯಾಗುವ ಸಿನಿಮಾಗಳ ಸ್ಕ್ರೀನ್ ಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದೇವೆ. ಅವುಗಳಲ್ಲಿ ಕನಿಷ್ಠ ಒಂದಾದರೂ ಬಿಡುಗಡೆಯಾಗಲಿದೆ ಎಂದು ಸಿನಿಮಾ ಪಿಆರ್‍ಒ ಸುಧೇಂದ್ರ ವೆಂಕಟೇಶ್ ಹೇಳಿದ್ದಾರೆ.
200 ಸಿನಿಮಾಗಳಲ್ಲಿ 50 ರಿಂದ 100 ರವರೆಗೆ ಚಿತ್ರಗಳು ಕಡಿಮೆ ಅಂದರೆ 40-50 ಲಕ್ಷ ರೂ. ಕಡಿಮೆ ಬಜೆಟ್ ನ ಚಿತ್ರಗಳಾಗಿವೆ. ಕಡಿಮೆ ಬಜೆಟ್ ನ ಚಲನಚಿತ್ರಗಳಾದ ‘6-5 = 2’, ‘ಸಿಂಪಲ್ ಆಗಿ ಒಂದು ಲವ್ ಸ್ಟೋರಿ’ ಮತ್ತು ‘ಒಂದು ಮೊಟ್ಟೆಯ ಕಥೆ’ ಮೊದಲಾದ ಚಿತ್ರಗಳು ಪ್ರೇಕ್ಷರಿಗೆ ಮೆಚ್ಚುಗೆಯಾಗಿದೆ. ನನ್ನ ಸ್ಟುಡಿಯೋ ವರ್ಷಕ್ಕೆ 30-40 ಚಲನಚಿತ್ರಗಳನ್ನು ನಿರ್ವಹಿಸುತ್ತದೆ. ಇಂದು ಪ್ರತಿ ರಸ್ತೆಯ ಮೂಲೆಯಲ್ಲೂ ಸ್ಟುಡಿಯೋಗಳಿವೆ ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿಯ ಉಪಾಧ್ಯಕ್ಷ ಕರಿಸುಬ್ಬು ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.
ವೈವಿ ರಾವ್ ನಿರ್ದೇಶನದ ಕನ್ನಡದ ಮೊದಲ ಸಿನಿಮಾ `ಸತಿ ಸುಲೋಚನ’ 1934ರ ಮಾರ್ಚ್ 3 ರಂದು ಬಿಡುಗಡೆಯಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv