ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ರೈತರ ಸಾಲಮನ್ನಾ ಮಾಡಿದ ಮಧ್ಯಪ್ರದೇಶದ ನೂತನ ಸಿಎಂ

Public TV
2 Min Read
KAMALNATH
– ಮಧ್ಯಪ್ರದೇಶದ ನೂತನ ಸಾರಥಿಯಾಗಿ ಪ್ರಮಾಣವಚನ ಸ್ವೀಕರಿಸಿದ ಕಮಲ್‍ನಾಥ್

ಭೋಪಾಲ್: ಮಧ್ಯಪ್ರದೇಶದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ಸಿನ ಹಿರಿಯ ನಾಯಕ ಕಮಲ್‍ನಾಥ್ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ರಾಜ್ಯ ರೈತರ ಅಲ್ಪಾವಧಿ ಕೃಷಿಸಾಲ ಮನ್ನಾ (2 ಲಕ್ಷ ರೂ.ಒಳಗಿನ ಸಾಲ) ಮಾಡಿದ್ದಾರೆ.

ಇಂದು ನಡೆದ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲೆ ಆನಂದಿ ಬೆನ್ ಪಟೇಲ್ ಅವರು ನೂತನ ಮುಖ್ಯಮಂತ್ರಿ ಕಮಲ್‍ನಾಥ್ ಅವರಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದ್ದರು. ಬಳಿಕ 2018ರ ಮಾರ್ಚ್ 31ರ ಮೊದಲು ಸಾಲ ಪಡೆದ ರೈತರ ಅಲ್ಪಾವಧಿಯ 2 ಲಕ್ಷ ರೂಪಾಯಿ ವರೆಗಿನ ಸಾಲವನ್ನು ಮನ್ನಾ ಮಾಡುವ ಆದೇಶಕ್ಕೆ ಸಹಿ ಹಾಕಿದ್ದಾರೆ.

ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸಾಲಮನ್ನಾ ಕುರಿತು ಘೋಷಿಸಿಕೊಂಡಿದ್ದ ಕಾಂಗ್ರೆಸ್, ಅಧಿಕಾರದ ಗದ್ದುಗೆ ಏರಿದ ಮರುಕ್ಷಣವೇ ರೈತರ ಸಾಲಮನ್ನಾ ಮಾಡುವ ಮೂಲಕ ತನ್ನ ಮಾತನ್ನು ಉಳಿಸಿಕೊಂಡಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಇದು ಮೊದಲನೇ ಭಾಗದ ರೈತರ ಸಾಲಮನ್ನಾವನ್ನಾಗಿ, ಎರಡನೇಯದು ಶೀಘ್ರವೇ ನೆರವೇರುತ್ತದೆ ಎಂದು ಬರೆದುಕೊಂಡಿದ್ದಾರೆ.

ಮುಖ್ಯಮಂತ್ರಿ ಕಮಲ್‍ನಾಥ್ ಪ್ರಮಾಣವಚನ ಸಮಾರಂಭಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ರಾಜ್ಯದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಬಿಎಸ್‍ಪಿ, ಎಸ್‍ಪಿ ಪಕ್ಷಗಳ ಹಲವು ಮುಖಂಡರು ಭಾಗವಹಿಸಿದ್ದರು.

ನೆಹರೂ ಕುಟುಂಬಕ್ಕೆ ಪರಮಾಪ್ತರಾಗಿರುವ ಕಮಲ್ ನಾಥ್ ಇದೇ ಪ್ರಪ್ರಥಮ ಬಾರಿ ಮಧ್ಯಪ್ರದೇಶ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಮೂಲತಃ ಉತ್ತರ ಪ್ರದೇಶದ ಕಾನ್ಪುರದವರಾಗಿದ್ದರೂ, ಮಧ್ಯಪ್ರದೇಶದ ಛಿಂದವಾಡ ಕೋಲಸಭಾ ಕ್ಷೇತ್ರದಿಂದ ಸತತ ಒಂಭತ್ತು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು.

ಕಳೆದ ಮೇ ತಿಂಗಳಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಲ್ಲದೇ ವಿಧಾನಸಭಾ ಚುನಾವಣೆಯ ಮುಂದಾಳತ್ವವನ್ನು ಯಶಸ್ವಿಯಾಗಿ ಮುನ್ನಡೆಸಿ, ಸತತ 15 ವರ್ಷಗಳ ಬಳಿಕ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಅನ್ನು ಅಧಿಕಾರದ ಚುಕ್ಕಾಣಿಯನ್ನು ಹಿಡಿಯುವಂತೆ ಮಾಡಿದ್ದರು.

230 ವಿಧಾನಸಭಾ ಕ್ಷೇತ್ರಗಳ ಪೈಕಿ ಬಹುಮತಕ್ಕೆ 116 ಸ್ಥಾನಗಳು ಬೇಕಾಗಿತ್ತು. ಕಾಂಗ್ರೆಸ್ ತನ್ನ 114 ಸ್ಥಾನಗಳ ಜೊತೆಗೆ ಬಿಎಸ್‍ಪಿಯ 2, ಎಸ್‍ಪಿ 1 ಹಾಗೂ ಪಕ್ಷೇತರರ 4 ಸ್ಥಾನಗಳೊಂದಿಗೆ 121 ಸ್ಥಾನಗಳನ್ನು ಪಡೆದು ಸರ್ಕಾರ ರಚಿಸಿದೆ.

ಡಿಸೆಂಬರ್ 11 ರಂದು ಪ್ರಕಟಗೊಂಡ ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಫಲಿತಾಂಶದ 230 ಕ್ಷೇತ್ರಗಳಲ್ಲಿ ಕಾಂಗ್ರೆಸ್ 114 ಸ್ಥಾನಗಳನ್ನು ಪಡೆದಿತ್ತು. ಉಳಿದಂತೆ ಆಡಳಿತಾರೂಢ ಬಿಜೆಪಿ 109 ಸ್ಥಾನಕ್ಕೆ ತೃಪ್ತಿಪಟ್ಟಿತ್ತು. ಉಳಿದಂತೆ ಬಿಎಸ್‍ಪಿ 2, ಎಸ್‍ಪಿ 1 ಹಾಗೂ ಇತರರು 4 ಸ್ಥಾನಗಳಲ್ಲಿ ಜಯಗಳಿಸಿದ್ದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *