ಬೆಂಗಳೂರು: ರಾಜ್ಯದಲ್ಲಿ ಪ್ರವಾಹದ ಭೀಕರತೆಗೆ ಜನರು ತತ್ತರಿಸಿ ಹೋಗಿದ್ದಾರೆ. ಅರ್ಧ ಕರ್ನಾಟಕದ ಜನರ ಬದುಕು ಪ್ರವಾಹದಿಂದ ಬೀದಿಗೆ ಬಂದಿದೆ. ಇತ್ತ ಕೇಂದ್ರದಿಂದ ರಾಜ್ಯಕ್ಕೆ ಬಿಡಿಗಾಸು ಪರಿಹಾರ ಸಿಕ್ಕಿಲ್ಲ. ಆದರೆ ನೂತನ ಸಚಿವರಿಗೆ ಮಾತ್ರ ಕಾಸ್ಟ್ಲಿ ಕಾರಿನ ವ್ಯಾಮೋಹ ಶುರುವಾಗಿದೆ.
ಕೇಂದ್ರ ಹಾಗೂ ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದ್ದರೂ ಕೂಡ ಪ್ರವಾಹ ಪರಿಹಾರ ಧನವನ್ನು ಬಿಜೆಪಿ ನಾಯಕರಿಗೆ ಕೊಡಿಸಲು ವಿಳಂಬವಾಗುತ್ತಿದೆ. ಸಿಎಂ ಬಿಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟದ ಹೊಸ ಸಚಿವರಿಗೆ ಓಡಾಡೋಕೆ ಮಾತ್ರ ದುಬಾರಿ ಕಾರು ಬೇಕಂತೆ. ಸದ್ಯ 15 ಲಕ್ಷದಿಂದ 23 ಲಕ್ಷದ ಇನ್ನೋವಾ ಕಾರನ್ನು ನೂತನ ಸಚಿವರುಗಳಿಗೆ ನೀಡಲಾಗಿದ್ದು, ನಮಗೆ ಇದರಲ್ಲಿ ಓಡಾಡೋಕೆ ಆಗಲ್ಲ 40-45 ಲಕ್ಷದ ಫಾರ್ಚೂನರ್ ಕಾರೇ ಬೇಕು ಎಂದು ಸಚಿವರು ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಅರ್ಧ ರಾಜ್ಯದ ಜನ ಸೂರಿಲ್ಲದೇ ಕಣ್ಣೀರಿನಲ್ಲಿ ಕೈತೊಳೆಯುವ ಈ ಪರಿಸ್ಥಿತಿಯಲ್ಲಿ ಪ್ರಭಾವಿ ಮುಖಂಡರು ಕಾಸ್ಟ್ಲಿ ಕಾರಿಗೆ ಡಿಮ್ಯಾಂಡ್ ಇಟ್ಟಿದ್ದು ಚರ್ಚೆಗೆ ಗ್ರಾಸವಾಗಿದೆ. ಸಚಿವರಿಗೆ ಈವರೆಗೂ ಖಾತೆಯೇ ಹಂಚಿಕೆಯಾಗಿಲ್ಲ, ಅಷ್ಟರಲ್ಲೇ ಶೋಕಿ ಶುರು ಮಾಡಿಕೊಂಡಿರುವ ಪ್ರಭಾವಿ ಸಚಿವರುಗಳ ಕಾರು ಕ್ಯಾತೆಗೆ ಜನ ಕೆಂಡಾಮಂಡಲರಾಗಿದ್ದಾರೆ.