ಬೆಂಗಳೂರು: ಇಷ್ಟು ದಿನ ಸಂಪುಟ ವಿಸ್ತರಣೆ ಯಾವಾಗ ಎಂಬ ಪ್ರಶ್ನೆ ಸಮ್ಮಿಶ್ರ ಸರ್ಕಾರದ ಅಂಗಳದಲ್ಲಿ ಕೇಳಿಬರುತ್ತಿತ್ತು. ಕಾಂಗ್ರೆಸ್ ಇಬ್ಬರು ಸಚಿವರಿಗೆ ಕೊಕ್ ನೀಡಿ ಸಂಪುಟವನ್ನು ಪುನರ್ ರಚನೆ ಮಾಡಿದೆ. ನೂತನ ಸಚಿವರಾಗಿ 8 ಕಾಂಗ್ರೆಸ್ ಶಾಸಕರು ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಇದೀಗ ಖಾತೆ ಹಂಚಿಕೆ ಯಾವಾಗ ಎಂಬ ಪ್ರಶ್ನೆಯನ್ನು ಕೇಳುತ್ತಿದ್ದಾರೆ. ಮತ್ತೆ ಕೆಲವರು ಇದೇ ಖಾತೆಯನ್ನು ನೀಡಿ ಅಂತಾ ಲಾಭಿ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಹಾಲಿ ಸಚಿವರು ಮತ್ತು ನೂತನ ಸಚಿವರ ನಡುವೆ ಖಾತೆಗಾಗಿ ಶೀತಲ ಸಮರ ಏರ್ಪಟ್ಟಿದೆ. ಎಂ.ಬಿ.ಪಾಟೀಲ್ ಮತ್ತು ಪರಮೇಶ್ವರ್, ಡಿಕೆ ಶಿವಕುಮಾರ್ ನಡುವೆ ಖಾತೆಗಾಗಿ ಮುಸುಕಿನ ಗುದ್ದಾಟ ಏರ್ಪಟ್ಟಿದ್ದು, ಗೃಹ ಅಥವಾ ಜಲಸಂಪನ್ಮೂಲ ಖಾತೆ ನೀಡಬೇಕೆಂದು ಪಾಟೀಲರು ಪಟ್ಟು ಹಿಡಿದಿದ್ದಾರಂತೆ. ಇದೇ ರೀತಿಯಲ್ಲಿ ಸತೀಶ್ ಜಾರಕಿಹೊಳಿ ಮತ್ತು ಕೃಷ್ಣಭೈರೇಗೌಡರ ಮಧ್ಯೆಯೂ ಖಾತೆಗಾಗಿ ಪೈಪೋಟಿ ಏರ್ಪಟ್ಟಿದೆಯಂತೆ. ಕೃಷ್ಣೌಭೈರೇಗೌಡರ ಬಳಿಯಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಖಾತೆಯನ್ನು ನೀಡಬೇಕೆಂದು ಸತೀಶ್ ಜಾರಕಿಹೊಳಿ ಕೇಳಿದ್ದಾರೆ ಎಂದು ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.
Advertisement
Advertisement
ಡಿಕೆಶಿವಕುಮಾರ್ ಜಲಸಂಪನ್ಮೂಲ ಖಾತೆಯನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲ. ಇತ್ತ ಜಿ.ಪರಮೇಶ್ವರ್ ಸಹ ಗೃಹ ಖಾತೆ ನೀಡಲು ಹಿಂದೇಟು ಹಾಕುತ್ತಿದ್ದಾರೆ ಎಂಬ ಸುದ್ದಿ ಕಾಂಗ್ರೆಸ್ ಅಂಗಳದಲ್ಲಿ ಹರಿದಾಡುತ್ತಿದೆ. ಈ ಸಂಬಂಧ ಕಾಂಗ್ರೆಸ್ ಮನೆಯಲ್ಲಿ ಸದಸ್ಯರ ನಡುವೆಯೇ ನಾ ಕೊಡೆ, ನಾ ಬಿಡೇ ಆರಂಭವಾಗಿದೆ.
Advertisement
ಈ ಸಮಸ್ಯೆಯನ್ನು ಬಗೆಹರಿಸಲು ರಾಜಧಾನಿ ರಾಜ್ಯ ಉಸ್ತುವಾರಿ ನಾಯಕ ವೇಣುಗೋಪಾಲ್ ಆಗಮಿಸಿದ್ದಾರೆ. ಕೆಕೆ ಗೆಸ್ಟ್ ಹೌಸ್ನಲ್ಲಿರುವ ವೇಣುಗೋಪಾಲ್ ಅವರನ್ನು ನೂತನ ಸಚಿವರಾದ ಎಂಟಿಬಿ ನಾಗರಾಜ್ ಮತ್ತು ರಹೀಂ ಖಾನ್ ಭೇಟಿಯಾಗಿದ್ದಾರೆ. ಭೇಟಿ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಎಂಟಿಬಿ ನಾಗರಾಜ್, ಪಕ್ಷದಲ್ಲಿ ಸಚಿವ ಸ್ಥಾನ ಸಿಗದವರಿಗೆ ಸಹಜವಾಗಿ ಅಸಮಾಧಾನ ಆಗುತ್ತೆ, ಹಾಗಂತ ಯಾರು ಪಕ್ಷ ಬಿಟ್ಟು ಹೋಗಲ್ಲ. ಅಸಮಾಧಾನವನ್ನ ನಮ್ಮ ನಾಯಕರು ಸರಿ ಮಾಡ್ತಾರೆ. ನನಗೆ ಇಂತಹದ್ದೇ ಖಾತೆ ಬೇಕು ಅಂತ ನಾನು ಕೇಳಿಲ್ಲ. ಯಾವುದೇ ಕೊಟ್ರು ಪ್ರಾಮಾಣಿಕವಾಗಿ ಕೆಲಸ ಮಾಡ್ತೀನಿ ಅಂತಾ ಹೇಳಿದ್ದಾರೆ.
Advertisement
ಪ್ರತಿಬಾರಿಯೂ ಹೈದರಾಬಾದ್ ಕರ್ನಾಟಕಕ್ಕೆ ಅನ್ಯಾಯ ಆಗುತ್ತದೆ. ಈ ಅನ್ಯಾಯ ಸರಿಪಡಿಸುವಂತೆ ವೇಣುಗೋಪಾಲ್ ಅವರ ಬಳಿ ಮನವಿ ಮಾಡಿದ್ದೇನೆ. ಖಾತೆ ಕುರಿತು ಯಾವುದೇ ಮಾತುಕತೆ ನಡೆಸಿಲ್ಲ. ಯಾವುದೇ ಖಾತೆ ಕೊಟ್ರು ನಿಭಾಯಿಸುತ್ತೇನೆ. ಮಲ್ಲಿಕಾರ್ಜುನ ಖರ್ಗೆ ಅಸಮಾಧಾನದ ಬಗ್ಗೆ ಗೊತ್ತಿಲ್ಲ. ಯಾವುದೇ ಖಾತೆ ನೀಡಿದರೂ ಓಕೆ ಅಂದಿದ್ದೇನೆ ಎಂದು ರಹೀಂ ಖಾನ್ ತಿಳಿಸಿದರು. ವೇಣುಗೋಪಾಲ್ ಅವರ ಸಮ್ಮುಖದಲ್ಲಿ ಸಭೆ ನಡೆಸಿ ಇಂದು ಸಂಜೆಯೊಳಗಾಗಿ ಖಾತೆ ಹಂಚಿಕೆಯಾಗುವ ಸಾಧ್ಯತೆಗಳಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv