ಲಕ್ನೋ: ನೀಟ್ (NEET) ಮತ್ತು ಯುಜಿಸಿ ನೆಟ್ (UGC-NET) ಪರೀಕ್ಷೆಗಳಲ್ಲಿ ಅಕ್ರಮ ನಡೆದಿರುವುದು ಪತ್ತೆಯಾದ ಬೆನ್ನಲ್ಲೇ ಇಂತಹ ಪ್ರಕರಣಗಳಿಗಾಗಿ ಕಠಿಣ ಕಾನೂನು ಕ್ರಮ ರೂಪಿಸಲು ಉತ್ತರ ಪ್ರದೇಶ (Uttar Pradesh) ಸರ್ಕಾರ ಮುಂದಾಗಿದೆ.
ಪರೀಕ್ಷಾ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿರುವವರ ವಿರುದ್ಧ ಕಠಿಣ ಕ್ರಮ, ಭಾರೀ ದಂಡ, ಬುಲ್ಡೋಜರ್ ಕ್ರಮ ಮತ್ತು ಜೈಲು ಶಿಕ್ಷೆಗೆ ಒಳಪಡಿಸುವ ಬಗ್ಗೆ ಚರ್ಚಿಸಲಾಗುತ್ತಿದೆ. ಯುಜಿಸಿ- ನೆಟ್ (ವಿಶ್ವವಿದ್ಯಾಲಯ ಅನುದಾನ ಆಯೋಗ – ರಾಷ್ಟ್ರೀಯ ಅರ್ಹತಾ ಪರೀಕ್ಷೆ) ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ರದ್ದುಗೊಳಿಸಿದ ಕೆಲವೇ ದಿನಗಳ ಅಂತರದಲ್ಲಿ ಯೋಗಿ ಆದಿತ್ಯನಾಥ್ (CM Yogi Adityanath) ನೇತೃತ್ವದ ಸರ್ಕಾರದಿಂದ ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದೆ. ಇದನ್ನೂ ಓದಿ: 98 ಭಾರತದ ಹಜ್ ಯಾತ್ರಿಕರು ಸಾವು – ವಿದೇಶಾಂಗ ಇಲಾಖೆಯಿಂದ ಅಧಿಕೃತ ಮಾಹಿತಿ
ಉತ್ತರ ಪ್ರದೇಶದಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ತಡೆಯಲು ಪ್ರತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕನಿಷ್ಠ ಎರಡು ವಿಭಿನ್ನ ಸೆಟ್ ತಯಾರಿಸುವುದು. ಪ್ರತ್ಯೇಕ ಏಜೆನ್ಸಿಗಳಿಂದ ಮುದ್ರಿಸಲಾಗುವುದು. ಅಲ್ಲದೇ ಪೇಪರ್ ಕೋಡಿಂಗ್ ಕಾರ್ಯ ವಿಧಾನಗಳನ್ನು ಹೆಚ್ಚು ವ್ಯವಸ್ಥಿತವಾಗಿ ಜಾರಿಗೆ ತರಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸರ್ಕಾರಿ ಪ್ರೌಢಶಾಲೆಗಳು, ಪದವಿ ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಪಾಲಿಟೆಕ್ನಿಕ್‍ಗಳು, ಎಂಜಿನಿಯರಿಂಗ್ ಕಾಲೇಜುಗಳು, ವೈದ್ಯಕೀಯ ಕಾಲೇಜುಗಳು ಅಥವಾ ಸರಿಯಾದ ದಾಖಲೆಗಳೊಂದಿಗೆ ಪ್ರತಿಷ್ಠಿತ, ಉತ್ತಮ ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಮಾತ್ರ ಪರೀಕ್ಷಾ ಕೇಂದ್ರಗಳಾಗಿ ಗೊತ್ತುಪಡಿಸಲಾಗುತ್ತದೆ. ಈ ಕೇಂದ್ರಗಳು ಸಿಸಿಟಿವಿ ವ್ಯವಸ್ಥೆಯ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಲಾಗುತ್ತದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ.
4 ಲಕ್ಷಕ್ಕಿಂತ ಹೆಚ್ಚು ಅಭ್ಯರ್ಥಿಗಳಿದ್ದರೆ ಎರಡು ಹಂತಗಳಲ್ಲಿ ಪರೀಕ್ಷೆ ನಡೆಯಲಿದೆ. ಪ್ರಾಂತೀಯ ನಾಗರಿಕ ಸೇವಾ ಪರೀಕ್ಷೆಯನ್ನು ಒಂದೇ ಹಂತದಲ್ಲಿ ನಡೆಸಬಹುದು. ಫಲಿತಾಂಶಗಳನ್ನು ತಿದ್ದುವುದನ್ನು ತಡೆಯಲು ಓಎಂಆರ್ ಶೀಟ್‍ಗಳ ಸ್ಕ್ಯಾನಿಂಗ್‍ನ್ನು ಆಯೋಗ ಮತ್ತು ಮಂಡಳಿಯು ಸ್ವತಃ ನಡೆಸುತ್ತದೆ. ಪ್ರಶ್ನೆಪತ್ರಿಕೆಗಳು ರಹಸ್ಯ ಸಂಕೇತಗಳು ಮತ್ತು ಗೌಪ್ಯ ಭದ್ರತಾ ವೈಶಿಷ್ಟ್ಯಗಳಾದ ಬಾರ್‍ಕೋಡ್‍ಗಳು, ಕ್ಯೂಆರ್ ಕೋಡ್‍ಗಳು ಇರಲಿದ್ದು, ಇದು ಪ್ರತಿ ಪುಟದಲ್ಲಿನ ಸರಣಿ ಸಂಖ್ಯೆಗಳನ್ನು ಗುರುತಿಸಲಿದೆ.
ಪ್ರಶ್ನೆ ಪತ್ರಿಕೆಗಳ ಸಾಗಣೆ ಟ್ಯಾಂಪರ್-ಪ್ರೂಫ್, ಬಹು-ಪದರದ ಪ್ಯಾಕೇಜಿಂಗ್‍ನ್ನು ಒಳಗೊಂಡಿರುತ್ತದೆ. ಮುದ್ರಣಾಲಯಗಳನ್ನು ಅತ್ಯಂತ ಗೌಪ್ಯವಾಗಿ ಇಡಲಾಗುವುದು. ಮುದ್ರಣಾಲಯಕ್ಕೆ ಭೇಟಿ ನೀಡುವವರನ್ನು ಪರೀಕ್ಷಿಸಲಾಗುವುದು ಮತ್ತು ಭೇಟಿಗೆ ಗುರುತಿನ ಚೀಟಿ ಕಡ್ಡಾಯವಾಗೊಳಿಸಲಾಗುವುದು. ಇದರೊಂದಿಗೆ ಹೊರಗಿನವರ ಪ್ರವೇಶಕ್ಕೆ ಅನುಮತಿ ಇರುವುದಿಲ್ಲ. ಇಷ್ಟೇ ಅಲ್ಲದೇ ಮುದ್ರಣಾಲಯದಲ್ಲಿ ಸ್ಮಾರ್ಟ್‌ಫೋನ್‌ಗಳು ಮತ್ತು ಕ್ಯಾಮೆರಾಗಳನ್ನು ಒಯ್ಯುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮುದ್ರಣಾಲಯದ ಸುತ್ತಲೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಒಂದು ವರ್ಷದವರೆಗೆ ರೆಕಾರ್ಡ್ ಆಗಿರುವ ವೀಡಿಯೋ ಸಂಗ್ರಹಿಸಿಡಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ. ಇದನ್ನೂ ಓದಿ: ದಾಖಲೆಗಳನ್ನು ನೋಡಲ್ಲ ಎಂದಿದ್ದ ದೆಹಲಿ ಕೋರ್ಟ್ – ಕೇಜ್ರಿವಾಲ್‌ಗೆ ಜಾಮೀನಿಗೆ ತಡೆ ನೀಡಿದ ಹೈಕೋರ್ಟ್