ಭಾರತವನ್ನ ಹಿಂದೂ ರಾಷ್ಟ್ರವಾಗಲು ಬಿಡಲ್ಲ: ಸಿದ್ದರಾಮಯ್ಯ

Public TV
2 Min Read
SIDDU

ಬೆಂಗಳೂರು: ಭಾರತ ಒಂದು ಜಾತ್ಯಾತೀತ ರಾಷ್ಟ್ರವಾಗಿದ್ದು ಅದನ್ನು ಹಿಂದೂ ರಾಷ್ಟ್ರವನ್ನಾಗಿಸಲು ಬಿಡುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಿಎಎ ಮತ್ತು ಎನ್‍.ಆರ್.ಸಿ ಕಾರ್ಯಾಗಾರದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಪೌರತ್ವ ಕಾಯ್ದೆ, ಎನ್.ಪಿ.ಆರ್, ಎನ್‍.ಆರ್.ಸಿ ಎಲ್ಲವೂ ಒಂದೇ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಮೋದಿ ಈ ಬಗ್ಗೆ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

KPCC A

ಎನ್‍ಪಿಆರ್ ಹಿಂದೆ ರಾಕ್ಷಸಿ ಉದ್ದೇಶವಿದೆ. ಸಂವಿಧಾನ ವಿರೋಧಿ ಕಾಯ್ದೆ ಇದಾಗಿದೆ. ಅಕ್ರಮ ವಲಸಿಗರನ್ನು ಸಕ್ರಮ ಗೊಳಿಸಲು ನಮ್ಮ ವಿರೋಧ ಇಲ್ಲ. ಆದರೆ ಮುಸ್ಲಿಮರನ್ನು ಹೊರಗಿಟ್ಟಿರುವುದು ಯಾಕೆ? ಮುಸ್ಲಿಮರೂ ನಮ್ಮ ದೇಶಕ್ಕೆ ಬಂದಿದ್ದಾರೆ. ಬಾಂಗ್ಲಾ, ಪಾಕಿಸ್ತಾನ, ಅಫ್ಘಾನಿಸ್ಥಾನ ಬಿಟ್ಟು ಇತರ ನೆರೆ ರಾಜ್ಯಗಳಿಂದಲೂ ಹಲವರು ವಲಸೆ ಬಂದಿದ್ದಾರೆ. ಅವರನ್ನು ಏಕೆ ಕಾಯ್ದೆಯಿಂದ ಹೊರಗಿಡಲಾಗಿದೆ ಎಂದು ಪ್ರಶ್ನಿಸಿದರು.

ನಿಮ್ಮ ಉದ್ದೇಶ ದೇಶವನ್ನು ಹಿಂದೂ ರಾಷ್ಟ್ರ ಮಾಡಬೇಕು ಎಂಬುದು ಅಷ್ಟೇ. ಇದು ಬಿಜೆಪಿಯ ಹಿಡನ್ ಅಜೆಂಡಾ ಆಗಿದೆ. ಜಾತ್ಯಾತೀತತೆ ಸಂವಿಧಾನದ ಮೂಲ ಆಶಯವಾಗಿದ್ದು ಅದನ್ನು ಉಲ್ಲಂಘಿಸಲಾಗುತ್ತಿದೆ. ಬಹುಮತ ಇರುವ ಪಕ್ಷ ಕಾನೂನು ಮಾಡಲಿ, ಆದರೆ ಅದು ನ್ಯಾಯಬದ್ಧ ಇಲ್ಲವಾದರೆ ಅದನ್ನು ವಿರೋಧಿಸಿ ಎಂದು ಗಾಂಧೀಜಿ ಹೇಳಿದ್ದರು. ಈ ಕಾಯ್ದೆ ನಮಗೆ ಬೇಕಾಗಿದೆಯಾ? ದೇಶದಲ್ಲಿ ಸಮಾಜ ಕಿತ್ತು ತಿನ್ನುವ ಸಮಸ್ಯೆಗಳಿದ್ದು ಈ ಬಗ್ಗೆ ನೀವು ಮಾತನಾಡುತ್ತಿಲ್ಲ ಎಂದು ಬಿಜೆಪಿಯವರನ್ನು ತರಾಟೆಗೆ ತೆಗೆದುಕೊಂಡರು.

SIDDARAMAIAH 1

ಪ್ರಣಾಳಿಕೆಯಲ್ಲೇ ನೀವು ಎನ್‍.ಆರ್.ಸಿ ತರುತ್ತೇವೆ ಎಂದು ಹೇಳಿದ್ದು ಅದಕ್ಕೆ ತಂದಿದ್ದೀರ. ಬೇರೆ ವಿಚಾರ ಬಗ್ಗೆಯೂ ಪ್ರಣಾಳಿಕೆಯನ್ನು ಹೇಳಿದ್ದೀರಿ. ಅದನ್ನು ಏಕೆ ಜಾರಿ ಮಾಡುತ್ತಿಲ್ಲ? ಬಹುಮತ ಇದ್ದರೂ ಜನವಿರೋಧಿ ಕಾನೂನು ತರಬಾರದು. ಅದು ಪ್ರಜಾಪ್ರಭುತ್ವ. ಇದನ್ನು ನಾವು ವಿರೋಧ ಮಾಡಲೇ ಬೇಕು ಎಂದರು.

ಕೇಂದ್ರ ಸರ್ಕಾರ ತಂದಿರುವ ಕಾನೂನು ಸಂವಿಧಾನ ವಿರೋಧಿ ಮಾತ್ರವಲ್ಲ, ಮಾನವೀಯತೆಯ ವಿರೋಧಿ ಆಗಿದೆ. ಮನುಷ್ಯತ್ವದ ವಿರೋಧಿಯಾಗಿದೆ. ಈ ಕಾಯ್ದೆಯಿಂದ ಎಲ್ಲರಿಗೂ ಅನ್ಯಾಯವಾಗುತ್ತದೆ. ದಲಿತರಿಗೆ, ಆದಿವಾಸಿಗಳಿಗೆ ಎಲ್ಲರಿಗೂ ಅನ್ಯಾಯ ಆಗುತ್ತದೆ. ರೈತರು, ನಿರುದ್ಯೋಗಿಗಳು ಆತ್ಮಹತ್ಯೆ ಮಾಡುತ್ತಿದ್ದಾರೆ. ಅದರ ಬಗ್ಗೆ ನೋಡಿಯೇ ನಾವು ದೇಶವನ್ನು ಹಿಂದೂ ರಾಷ್ಟ್ರ ಆಗಲು ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *