ಮುಂಬೈ: ಸೆಪ್ಟೆಂಬರ್ 1 ರಿಂದ ಥರ್ಡ್ ಪಾರ್ಟಿ ವಿಮೆ ಮೊತ್ತ ಹೆಚ್ಚಾಗಲಿದೆ. ಸುಪ್ರೀಂ ಕೋರ್ಟ್ ನಿರ್ದೇಶನದ ಅನ್ವಯ ಭಾರತೀಯ ವಿಮಾ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ( ಐಆರ್‌ಡಿಎ ) ನೂತನ ವಿಮಾ ನೀತಿ ಶನಿವಾರದಿಂದ ಜಾರಿಯಾಗಲಿದೆ.
ಈ ನೀತಿಯಿಂದಾಗಿ ಸೆಪ್ಟೆಂಬರ್ 1 ರಿಂದ ಹೊಸ ದ್ವಿ-ಚಕ್ರವಾಹನ ಹಾಗೂ ಕಾರುಗಳನ್ನು ಖರೀದಿ ಮಾಡುವ ಗ್ರಾಹಕರಿಗೆ ಹೆಚ್ಚಿನ ಹೊರೆ ಬೀಳಲಿದೆ. ತನ್ನ ನೂತನ ವಿಮಾ ನೀತಿಯಲ್ಲಿ ಕಾರುಗಳ ಮೇಲಿನ 3 ವರ್ಷಕ್ಕೆ ಹಾಗೂ ದ್ವಿ-ಚಕ್ರವಾಹನಗಳ ಮೇಲಿನ 5 ವರ್ಷದ ವಿಮಾ ಮೊತ್ತದಲ್ಲಿ ಶೇ 2.45 ರಿಂದ ಶೇ 5.61 ರವರೆಗೆ ಹೆಚ್ಚಳಮಾಡಿದೆ.
ಐಆರ್‌ಡಿಎಯ ನೂತನ ವಿಮಾ ನೀತಿಯನ್ನು ವಾಹನ ತಯಾರಿಕಾ ಸಂಸ್ಥೆಗಳು ಸ್ವಾಗತಿಸಿದ್ದು, ವಾಹನಗಳ ಮಾಲೀಕರು ವರ್ಷ ಕಳೆದಂತೆ ವಾಹನಗಳ ಮೌಲ್ಯ ಕಡಿಮೆಯಾಗುತ್ತದೆಂದು ಅವುಗಳ ವಿಮಾ ನವೀಕರಣಕ್ಕೆ ಮುಂದಾಗುವುದಿಲ್ಲ. ಇದರಿಂದಾಗಿ ಉಂಟಾಗುವ ಅವಘಡಗಳಿಂದ ವಾಹನ ತಯಾರಿಕಾ ಸಂಸ್ಥೆಗಳಿಗೆ ದೊಡ್ಡ ತಲೆನೋವಾಗಿತ್ತು. ಆದರೆ ಈಗ ನೂತನ ವಿಮಾ ನೀತಿಗೆ ಎಲ್ಲಾ ವಾಹನಗಳು ಒಳಪಡುವುದರಿಂದ ತಯಾರಿಕಾ ಸಂಸ್ಥೆಗಳಿಗೆ ಸಹಾಯಕವಾಗಲಿದೆ ಎಂದು ತಿಳಿದು ಬಂದಿದೆ.
ನೂತನ ವಿಮಾ ನಿಯಮದ ಮೊತ್ತವು ವಾಹನಗಳ ಇಂಜಿನ್ ಸಿಸಿಗಳಿಗೆ ಅನುಗುಣವಾಗಿ ಬದಲಾವಣೆಯಾಗುತ್ತದೆ. ಅಲ್ಲದೇ ಪ್ರತಿ ವರ್ಷ ವಿಮೆ ಮರು ನವೀಕರಣ ಮಾಡುವ ವಾಹನ ಮಾಲೀಕರಿಗೆ ಈ ನೂತನ ವಿಮಾ ನೀತಿ ಅನ್ವಯವಾಗುವುದಿಲ್ಲ.
ನೂತನ ವಿಮಾ ನೀತಿ ಜಾರಿ ತಂದಿದ್ದೇಕೆ?
ಕೇಂದ್ರ ಸರ್ಕಾರದ ಅಪಘಾತಗಳ ವರದಿಯ ಪ್ರಕಾರ ಪ್ರತಿನಿತ್ಯ 1,374 ಅಪಘಾತಗಳು ಸಂಭವಿಸಿ, 400 ಮಂದಿ ಮೃತಪಡುತ್ತಿದ್ದಾರೆ. ಆದರೆ ಅಪಘಾತಗಳಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡಿರುವವರಿಗೆ ಸರಿಯಾದ ವಿಮಾ ಪರಿಹಾರ ಸಿಗುತ್ತಿರಲಿಲ್ಲ. ಈ ಕುರಿತು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಜೂನ್ 20ರಂದು ಕಡ್ಡಾಯವಾಗಿ ವಿಮಾ ಪಾಲಿಸಿಯನ್ನು ಜಾರಿಗೊಳಿಸುವಂತೆ ಐಆರ್‌ಡಿಎಗೆ ಆದೇಶ ನೀಡಿತ್ತು. ಅಲ್ಲದೇ ಕಾರುಗಳಿಗೆ ಪ್ರತಿ 3 ವರ್ಷಕ್ಕೊಮ್ಮೆ ಹಾಗೂ ದ್ವಿ-ಚಕ್ರವಾಹನಗಳಿಗೆ ಪ್ರತಿ 5 ವರ್ಷಕ್ಕೊಂದು ಬಾರಿ ವಿಮಾ ಮೊತ್ತ ಸಂಗ್ರಹಿಸುವಂತೆ ಸೂಚನೆ ನೀಡಿತ್ತು. ಇದರಿಂದಾಗಿ ಅಪಘಾತಗಳಲ್ಲಿ ಉಂಟಾದ ಹಾನಿ ಮತ್ತು ಇತರರಿಂದ ಉಂಟಾದ ಹಾನಿಯ ಪರಿಹಾರವನ್ನು ವಿಮಾ ಸಂಸ್ಥೆಗಳೇ ಒದಗಿಸುವಂತೆ ನಿರ್ದೇಶಿಸಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv