ಜೈಪುರ: ಇತ್ತೀಚೆಗೆ ಬಹುತೇಕ ಯುವಕ ಯುವತಿಯರು ಇಯರ್ ಫೋನ್‌ಗಿಂತ ಬಡ್‌ಗಳನ್ನೇ (Earbud) ಹೆಚ್ಚಾಗಿ ಬಳಸುತ್ತಾರೆ. ಕಿವಿಗೆ ಬಡ್‌ಗಳನ್ನ ಸಿಕ್ಕಿಸಿಕೊಂಡು ಒಬ್ಬೊಬ್ಬರೇ ಮಾತನಾಡಿಕೊಂಡು ಹೋಗ್ತಾರೆ. ಆದ್ರೆ ಕೆಲವೊಮ್ಮೆ ಇವು ಅಪಾಯಕಾರಿ ಘಟನೆ ಅನ್ನೋದಕ್ಕೆ ರಾಜಸ್ಥಾನದ ಘಟನೆಯೊಂದು ಸಾಕ್ಷಿಯಾಗಿದೆ.
ಹೌದು. ಜೆನ್-ಝೀಗಳ ಫೆವ್‌ರೆಟ್ ಆಗಿರುವ ಇಯರ್ ಬಡ್ ಕಿವಿಯಲ್ಲಿದ್ದಾಗಲೇ ಸ್ಫೋಟಗೊಂಡು ಯುವತಿ ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ. ರಾಜಸ್ತಾನದ ಮೆಡಿಕಲ್ ವಿದ್ಯಾರ್ಥಿಯೊಬ್ಬರು, ಜೆಬಿಎಲ್ ಇಯರ್‌ಬಡ್ (JBL Earbud) ಕಿವಿಗೆ ಹಾಕಿರುವಾಗಲೇ ಸ್ಫೋಟಗೊಂಡು ತಮ್ಮ ಕಿವಿಗೆ ಹಾನಿಯಾಗಿರುವುದಾಗಿ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹೇಳಿಕೊಂಡಿದ್ದಾರೆ. ಅವರ ಪೋಸ್ಟ್ ವೈರಲ್ ಆಗ್ತಿದ್ದಂತೆ ಜೆಬಿಎಲ್ ಸಂಸ್ಥೆ (JBL Company) ಕೂಡ ಪ್ರತಿಕ್ರಿಯೆ ನೀಡಿದೆ. ಜೊತೆಗೆ ಇಯರ್ ಪಾಡ್ ಬಳಸುವವರಿಗೆ ಕೆಲ ಸಲಹೆಗಳನ್ನೂ ನೀಡಿದೆ.
JBL right side earphones bursted in my ear and lead to TM membrane inflammation
It was gifted to me by my sister one month back , JBL tune beams 2 @JBLaudio pic.twitter.com/HTvceq0y3R
— A🕶 (@Capybara2233_) April 8, 2026
ಮೆಡಿಕಲ್ ವಿದ್ಯಾರ್ಥಿನಿಯ ಎಕ್ಸ್ ಪೋಸ್ಸ್‌ನಲ್ಲಿ ಏನಿದೆ?
JBL ಬಲಭಾಗದ ಇಯರ್ ಬಡ್ ನನ್ನ ಕಿವಿಯಲ್ಲಿ ಸಿಡಿದು ಟಿಎಂ ಪೊರೆಯ ಉರಿಯೂತಕ್ಕೆ (ಹಾನಿ) ಕಾರಣವಾಯಿತು. ಇದು ಒಂದು ತಿಂಗಳ ಹಿಂದೆ ನನ್ನ ಸಹೋದರಿ ನನಗೆ ಉಡುಗೊರೆಯಾಗಿ ನೀಡಿದ್ದಳು, ಜೆಬಿಎಲ್ ಟ್ಯೂನ್ ಬೀಮ್ 2 ಎಂದು ಬರೆದು ಅವರು @JBLaudioಗೆ ಟ್ಯಾಗ್ ಮಾಡಿದ್ದಾರೆ. ಜೊತೆಗೆ ಅವರು ಘಟನೆಯ ಬಳಿಕ ವೈದ್ಯರ ಬಳಿ ತಮ್ಮನ್ನ ತಾವು ತೋರಿಸಿಕೊಂಡ ಬಳಿಕ ವೈದ್ಯರು ನೀಡಿದ ಪ್ರಿಸ್ಕ್ರಿಪ್ಸನ್ ಫೋಟೋವನ್ನ ಕೂಡ ಅವರು ಹಂಚಿಕೊಂಡಿದ್ದಾರೆ.
ಬಡ್ ಸಿಡಿದ ಬಳಿಕ ವೈದ್ಯರು ಹೇಳಿದ್ದೇನು?
ವಿದ್ಯಾರ್ಥಿನಿ ಹಂಚಿಕೊಂಡ ವೈದ್ಯಕೀಯ ಪ್ರಿಸ್ಕ್ರಿಪ್ಷನ್‌ನಲ್ಲಿ ಘಟನೆಯ ಬಳಿಕ ಯುವತಿಗೆ ತಲೆತಿರುಗುವಿಕೆ, ವಾಕರಿಕೆ ಮತ್ತು ವಾಂತಿಯಂತಹ ಲಕ್ಷಣಗಳು ಕಂಡುಬಂದಿದೆ. ಗಾಯಕ್ಕೆ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸೆಯ ಅಗತ್ಯವಿದೆ ಎಂದು ಸೂಚಿಸಲಾಗಿದೆ. ಈ ವಿಚಾರದ ಬಗ್ಗೆ ನೆಟ್ಟಿಗರು ಚರ್ಚಿಸಲು ಆರಂಭಿಸಿದ್ದರಿಂದ ಈ ಪೋಸ್ಟ್ ಶೀಘ್ರದಲ್ಲೇ ವೈರಲ್ ಆಗಿದೆ.
@JBLaudio 7 months into buying SB590 soundbar and already motherboard has been replaced. Now it has stopped working again n I’m told the connector needs to be replaced. I’m wondering which all parts will require replacement in the coming months. Thank god for the 1 year warranty
— Rohan (@Rohan96408011) April 9, 2026
ಜೆಬಿಎಲ್ ಪ್ರತಿಕ್ರಿಯೆ ಏನು?
ಜೆಬಿಎಲ್ ಇಯರ್ ಬಡ್ ಕಂಪನಿ ಯುವತಿಯ ಪೋಸ್ಟ್‌ಗೆ ಪ್ರತಿಕ್ರಿಯಿಸಿದ್ದು, ಈ ದೂರನ್ನು ಗಮನಿಸಿದ್ದಾಗಿ ಹೇಳಿದೆ. ಅಲ್ಲದೇ ಈ ವಿಚಾರವನ್ನು ಭಾರತದ ತಂಡಕ್ಕೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸಿರುವುದಾಗಿ ಹಾಗೂ ಬಳಕೆದಾರರ ಜೊತೆ ನೇರ ಸಂಪರ್ಕಕ್ಕೆ ಸೂಚಿಸಿರುವುದಾಗಿಯೂ ಹೇಳಿದೆ.
ಜೊತೆಗೆ ಬ್ರ್ಯಾಂಡ್ ಪರಿಸ್ಥಿತಿಯನ್ನು ತನಿಖೆ ಮಾಡುತ್ತಿದೆ ಎಂದು ದೃಢಪಡಿಸಿದೆ. ಆದರೆ ಡಿವೈಸ್‌ನ ಸ್ಫೋಟದಿಂದ ಹೀಗಾಯ್ತು ಅಥವಾ ಹಾರ್ಡ್‌ವೇರ್ ವೈಫಲ್ಯದಿಂದ ಹೀಗಾಗಿರಬಹುದೇ ಎಂದು ಅದು ಖಚಿತಪಡಿಸಿಲ್ಲ. ಈ ಘಟನೆ ಆನ್‌ಲೈನ್‌ನಲ್ಲಿ ಮಿಶ್ರ ಪ್ರತಿಕ್ರಿಯೆಗೆ ಕಾರಣವಾಗಿದೆ. ಕೆಲವು ಬಳಕೆದಾರರು ವೈರ್‌ಲೆಸ್ ಇಯರ್‌ಬಡ್‌ಗಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಅಧಿಕ ಬಿಸಿಯಾಗುವುದು ಅಥವಾ ಸಾಧನದ ಹಠಾತ್ ಸ್ಥಗಿತಕ್ಕೆ ಸಂಬಂಧಿಸಿದ ವೈಯಕ್ತಿಕ ಅನುಭವಗಳನ್ನ ಹಂಚಿಕೊಂಡಿದ್ದಾರೆ.

