ರಾಮನಗರ: ಜಿಲ್ಲೆಯಲ್ಲಿ ಕಾಡಾನೆಗಳ (Wild Elephant) ಹಾವಳಿ ಮಿತಿಮೀರಿದ್ದು, ಅರಣ್ಯದಿಂದ ಜನವಸತಿ ಪ್ರದೇಶಕ್ಕೆ ಬರುವ ಕಾಡಾನೆಗಳನ್ನು ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ (Forest Department) ಹೊಸ ಪ್ರಯೋಗ ಮಾಡಿದೆ.
ಆನೆ ಕಂದಕ, ರೈಲ್ವೆ ಬ್ಯಾರಿಕೇಡ್‌ಗಳನ್ನ ನುಸುಳಿ ಗ್ರಾಮದತ್ತ ಬರುವ ಕಾಡಾನೆಗಳ ತಡೆಗೆ ಫಾರ್ಮ್ ಗಾರ್ಡ್ (Farm Guard) ಡಿವೈಸ್ ಎಂಬ ಎಲೆಕ್ಟ್ರಾನಿಕ್ ಉಪಕರಣ ಬಳಕೆ ಮಾಡಿ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಪ್ರಯೋಗ ಯಶಸ್ವಿಯಾಗಿದೆ. ಆನೆಗಳು ಕಾಡಿನಿಂದ ಆಚೆ ಬರುವಾಗ ಡಿವೈಸ್‌ನಲ್ಲಿರುವ ಸೆನ್ಸಾರ್ ಆನೆಗಳನ್ನು ಗುರುತಿಸಿ ಬಳಿಕ ವಿಚಿತ್ರ ಶಬ್ದ, ಬೆಳಕಿನ ಮೂಲಕ ಕಾಡಾನೆಗಳನ್ನು ವಾಪಸ್ ಕಾಡಿಗೆ ಓಡಿಸುತ್ತವೆ. ಈ ಡಿವೈಸ್ ನಲ್ಲಿರುವ ಸೆನ್ಸಾರ್‌ನಿಂದ ಕಾಡು ಪ್ರಾಣಿಗಳ ಚಲನವಲನಗಳ ಮೇಲೆ ನಿಗಾ ಇಡಲಿದ್ದು, ಕಾಡಿನಿಂದ ಆನೆಗಳು ಆಚೆ ಬರುವುದನ್ನ ತಡೆಯುವುದಲ್ಲದೇ, ತಕ್ಷಣ ಆನೆ ಕಾರ್ಯಪಡೆ ತಂಡಕ್ಕೆ ಮೊಬೈಲ್ ಮೂಲಕವೇ ವೀಡಿಯೋ ಸಹಿತ ಸಂದೇಶವನ್ನ ಕಳುಹಿಸಿಕೊಡುತ್ತದೆ. ಇದನ್ನೂ ಓದಿ: ದಸರಾ ಬಳಿಕ ಬಿಹಾರ ವಿಧಾನಸಭೆ ಚುನಾವಣೆ ದಿನಾಂಕ ನಿಗದಿ – ಚುನಾವಣಾ ಆಯೋಗದ ಮೂಲಗಳ ಹೇಳಿಕೆ
ಸದ್ಯ ಕನಕಪುರ ಹಾಗೂ ಚನ್ನಪಟ್ಟಣದಲ್ಲಿ ಎರಡು ಡಿವೈಸ್‌ಗಳನ್ನು ಅರಣ್ಯ ಇಲಾಖೆ ಇಟ್ಟಿದ್ದು, ಇದರಿಂದ ಕಾಡಾನೆಗಳನ್ನು ಹಿಮ್ಮೆಟ್ಟಿಸುವ ಪ್ರಯತ್ನ ಯಶಸ್ವಿಯಾಗಿದೆ. ಕಾಡಂಚಿನ ಗ್ರಾಮಗಳಲ್ಲಿ ಈ ಡಿವೈಸ್‌ಗಳ ಅಳವಡಿಕೆಗೆ ಅರಣ್ಯ ಇಲಾಖೆ ತಯಾರಿ ನಡೆಸಿದ್ದು, ಇದರಿಂದ ರೈತರು ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗೂ ಅನುಕೂಲವಾಗಲಿದೆ. ಅಲ್ಲದೇ ಸಬ್ಸಿಡಿ ದರದಲ್ಲಿ ರೈತರಿಗೆ ಫಾರ್ಮ್ ಗಾರ್ಡ್ ಡಿವೈಸ್ ವಿತರಿಸಲು ಅರಣ್ಯ ಇಲಾಖೆ ಚಿಂತನೆ ನಡೆಸಿದೆ ಎಂದು ಡಿಸಿಎಫ್ ರಾಮಕೃಷ್ಣಪ್ಪ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಜಿಎಸ್‌ಟಿ ಸುಧಾರಣೆ; ಮೋದಿ ಸರ್ಕಾರದಿಂದ ರಾಷ್ಟ್ರದ ಜನತೆಗೆ ದೀಪಾವಳಿ ಕೊಡುಗೆ – ಹೆಚ್‌ಡಿಕೆ ಹರ್ಷ