ನವದೆಹಲಿ: ವಿಶಾಖಪಟ್ಟಣಂನ ಖಾಸಗಿ ಕಾರ್ಖಾನೆಯಲ್ಲಿ ಅನಿಲ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಆಂಧ್ರಪ್ರದೇಶ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಮಾಧ್ಯಮಗಳ ವರದಿ ಆಧರಿಸಿ ಸ್ವಯಂ ದೂರು ದಾಖಲಿಸಿಕೊಂಡಿರುವ ಎನ್.ಹೆಚ್.ಆರ್.ಸಿ, ಈ ಸಂಬಂಧ ಸರ್ಕಾರ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ನೀಡುವಂತೆ ಆಂಧ್ರಪ್ರದೇಶ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಹಾಗೂ ಎಫ್‍ಐಆರ್ ದಾಖಲಿಸಿ ನಾಲ್ಕು ವಾರಗಳಲ್ಲಿ ತನಿಖೆಯ ಬೆಳವಣಿಗೆ ತಿಳಿಸಲು ಡಿಜಿಪಿಗೆ ಸೂಚನೆ ನೀಡಿದೆ.
Advertisement
Advertisement
ಘಟನೆಯಲ್ಲಿ 13 ಮಂದಿ ಸಾವನ್ನಪ್ಪಿದ್ದು ಐದು ಸಾವಿರಕ್ಕೂ ಹೆಚ್ಚು ಜನರು ಅಸ್ವಸ್ಥರಾಗಿದ್ದಾರೆ. ವಿಷಾನಿಲ ಮೂರು ಕಿ.ಮೀಗೂ ಹೆಚ್ಚಿನ ವ್ಯಾಪ್ತಿಯಲ್ಲಿ ವ್ಯಾಪಿಸಿದೆ ಎಂದು ವರದಿಯಾಗಿದ್ದು, ಹಲವರು ರಸ್ತೆಗಳ ಮಧ್ಯೆ ಮಲಗಿದ್ದಾರೆ. ಇನ್ನು ಕೆಲವರು ಉಸಿರಾಟ ತೊಂದರೆ ಎದುರಿಸುತ್ತಿರುವ ದೃಶ್ಯಗಳು ಕಂಡು ಬಂದಿವೆ.
Advertisement
Advertisement
ಸದ್ಯ ರಕ್ಷಣಾ ಕಾರ್ಯಾಚರಣೆಯ ಸ್ಥಿತಿ, ಅನಾರೋಗ್ಯಕ್ಕೆ ಒಳಗಾದ ಜನರಿಗೆ ವೈದ್ಯಕೀಯ ಚಿಕಿತ್ಸೆ ಮತ್ತು ರಾಜ್ಯ ಅಧಿಕಾರಿಗಳು ಒದಗಿಸಿದ ಪರಿಹಾರ ಮತ್ತು ಪುನರ್ವಸತಿ ಸೇರಿದಂತೆ ವಿವರವಾದ ವರದಿಯನ್ನು ನೀಡುವಂತೆ ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದೆ. ಅಲ್ಲದೇ ಆಂಧ್ರಪ್ರದೇಶದ ಪೊಲೀಸ್ ಮಹಾನಿರ್ದೇಶಕರಿಗೆ ನಾಲ್ಕು ವಾರಗಳಲ್ಲಿ ಎಫ್‍ಐಆರ್ ದಾಖಲಿಸಿ ಮತ್ತು ತನಿಖೆ ನಡೆಯುತ್ತಿರುವ ಸ್ಥಿತಿಯ ಬಗ್ಗೆ ತಿಳಿಸಲು ಹೇಳಿದೆ.
ಈ ವಿಚಾರವನ್ನು ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಗಮನಕ್ಕೆ ತರಲಾಗುವುದು ಎಂದು ಆಯೋಗವು ತಿಳಿಸಿದ್ದು, ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ನಿಗದಿಪಡಿಸಿರುವ ಮಾನದಂಡಗಳನ್ನು ನಿರ್ದಿಷ್ಟ ಕೈಗಾರಿಕಾ ಘಟಕದಲ್ಲಿ ಜಾರಿಗೊಳಿಸಲಾಗಿದೆಯೇ ಎಂದು ಪರಿಶೀಲಿಸಿ ನಾಲ್ಕು ವಾರಗಳಲ್ಲಿ ಪ್ರತಿಕ್ರಿಯೆ ನೀಡಲು ಸೂಚಿಸಿದೆ.