ನವದೆಹಲಿ: ಉನ್ನಾವೋ ಸಂತ್ರಸ್ತೆಗೆ ನ್ಯಾಯ ಕೊಡಿಸಿ ಎಂದು ತಾಯಿಯೊಬ್ಬಳು ತನ್ನ ಅಪ್ರಾಪ್ತ ಮಗಳ ಮೇಲೆ ಪೆಟ್ರೋಲ್ ಸುರಿದಿರುವ ಘಟನೆ ಇಂದು ಮಧ್ಯಾಹ್ನ ನವದೆಹಲಿಯ ಸಫ್ದರ್ಜಂಗ್ ಆಸ್ಪತ್ರೆ ಎದುರು ನಡೆದಿದೆ.
ಉನ್ನಾವೋ ಪ್ರಕರಣದ ಆರೋಪಿಗಳು ಜಾಮೀನಿನ ಮೇಲೆ ಹೊರ ಬಂದು ಪ್ರಕರಣದ ಸಂತ್ರಸ್ತೆಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು. ಈ ಘಟನೆಯಲ್ಲಿ ಶೇ.90 ರಷ್ಟು ಸುಟ್ಟು ಹೋಗಿದ್ದ ಸಂತ್ರಸ್ತೆ ಶುಕ್ರವಾರ ರಾತ್ರಿ 11.40 ಸಮಯದಲ್ಲಿ ಚಿಕಿತ್ಸೆ ಫಲಿಸದೆ ನವದೆಹಲಿಯ ಸಫ್ದರ್ಜಂಗ್ ಆಸ್ಪತ್ರೆ ಸಾವನ್ನಪ್ಪಿದ್ದಳು.
ಸಂತ್ರಸ್ತೆಯ ಸಾವಿನ ನಂತರ ಆಕೆಯ ಸಾವಿಗೆ ನ್ಯಾಯ ಬೇಕು ಎಂದು ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಯುತ್ತಿದ್ದು, ಈ ಪ್ರತಿಭಟನೆಯ ವೇಳೆ ಉನ್ನಾವೋ ಸಂತ್ರಸ್ತೆಗೆ ನ್ಯಾಯ ಕೊಡಿಸಿ ಎಂದು ಮಹಿಳೆಯೋರ್ವಳು ತನ್ನ 6 ವರ್ಷದ ಮಗಳ ಮೇಲೆ ಪೆಟ್ರೋಲ್ ಸುರಿದಿದ್ದಾಳೆ. ಆದರೆ ಸ್ಥಳದಲ್ಲಿದ್ದ ಪೊಲೀಸರು ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ ಹಾಗೂ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಉನ್ನಾವೋ ಗ್ಯಾಂಗ್ ರೇಪ್ ಮತ್ತು ಕೊಲೆ ಪ್ರಕರಣದ ಸಂತ್ರಸ್ತೆಯನ್ನು ಮರಣೋತ್ತರ ಪರೀಕ್ಷೆ ಮಾಡಿ ಮೃತದೇಹವನ್ನು ಉತ್ತರ ಪ್ರದೇಶದ ಆಕೆಯ ಗ್ರಾಮಕ್ಕೆ ಕೊಂಡೊಯ್ದ ಒಂದು ಗಂಟೆಯ ನಂತರ ಈ ಘಟನೆ ನಡೆದಿದೆ. ಉನ್ನಾವೋ ಸಂತ್ರಸ್ತೆಗೆ ಐವರು ಆರೋಪಿಗಳು ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ ನಂತರ ಶೇ.90 ರಷ್ಟು ಸುಟ್ಟಿದ್ದ ಸಂತ್ರಸ್ತೆ 40 ಗಂಟೆಗಳ ಕಾಲ ಸಾವು ಬದುಕಿನ ಮಧ್ಯೆ ಹೋರಾಡಿ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದರು.
Delhi: A woman protesting against Unnao rape case, threw petrol on her 6 year old daughter, outside Safadrjung hospital. The girl has been taken to emergency for the treatment, woman has been taken into custody by Police pic.twitter.com/IbCuQBIoeG
— ANI (@ANI) December 7, 2019
ಸಂತ್ರಸ್ತ ಯುವತಿ ಮೇಲೆ 2018ರಲ್ಲಿ ಸಾಮೂಹಿಕ ಅತ್ಯಾಚಾರ ನಡೆಸಲಾಗಿತ್ತು. ಮಾರ್ಚ್ 5 ಮತ್ತು 6 ರಂದು ಆರೋಪಿಗಳ ವಿರುದ್ಧ ಯುವತಿ ದೂರು ನೀಡಿದ್ದಳು. ತನಿಖೆ ನಡೆಸಿದ ಪೊಲೀಸರು ಪ್ರಮುಖ ಆರೋಪಿ ಶುಭಂ ತ್ರಿವೇದಿ ಎಂಬಾತನನ್ನು ಬಂಧಿಸಿದ್ದರು. ಕಳೆದ ನವೆಂಬರ್ 30ರಂದು ಆರೋಪಿ ಶುಭಂಗೆ ಕೋರ್ಟ್ ಜಾಮೀನು ನೀಡಿತ್ತು. ಡಿಸೆಂಬರ್ 5ರಂದು ಸಾಕ್ಷಿ ಹೇಳಲು ಕೋರ್ಟಿಗೆ ತೆರಳುತ್ತಿದ್ದ ಸಂತ್ರಸ್ತೆ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿದ್ದರು.
ಬೆಂಕಿ ಹೊತ್ತಿಕೊಂಡಿದ್ದ ಸಂತ್ರಸ್ತೆಯು ಕಾಪಾಡಿ, ಕಾಪಾಡಿ ಎಂದು ಕೂಗುತ್ತಿದ್ದಳು. ಆದರೆ ಬೆಂಕಿಯನ್ನು ಕಂಡು ನಾವು ಭಯಭೀತರಾಗಿದ್ದೇವು. ಯಾರೊಬ್ಬರೂ ರಕ್ಷಣೆಗೆ ನಿಲ್ಲದ ಪರಿಣಾಮ ಸಂತ್ರಸ್ತೆಯು ಸಂಪೂರ್ಣವಾಗಿ ಸುಟ್ಟುಹೋದಳು. ಅಷ್ಟೇ ಅಲ್ಲದೆ ಆಕೆ ಮಾಟಗಾತಿ ಎಂದು ಭಾವಿಸಿದ್ದೇವೆ. ಹೀಗಾಗಿ ಆಕೆಯ ಹಿಂದೆ ಓಡಿ ಕೊಲೆಗೆ ಯತ್ನಿಸಿದ್ದೇವು. ಸಂತ್ರಸ್ತೆಯ ದೇಹ ಶೇ.90ರಷ್ಟು ಸುಟ್ಟ ನಂತರವೂ ಆಕೆ ಸಹಾಯಕ್ಕಾಗಿ ಸುಮಾರು ಒಂದು ಕಿಲೋಮೀಟರ್ ಓಡಿ, ಸ್ವತಃ ಪೊಲೀಸರಿಗೆ ಕರೆ ಮಾಡಿದ್ದಾಳೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದ್ದರು.