ನವದೆಹಲಿ: ಮದುವೆಯಾಗಲು ಒಪ್ಪದ ಮಹಿಳೆಯನ್ನು ಕೊಲೆ ಮಾಡಿ ಐದು ತುಂಡು ಮಾಡಿ ಬೀಸಾಡಿದ್ದ ವ್ಯಕ್ತಿಯನ್ನು ದೆಹಲಿ ವಿಶೇಷ ಪೊಲೀಸರು ಬಂಧಿಸಿದ್ದಾರೆ.
ಕೊಲೆ ಮಾಡಿದ ವ್ಯಕ್ತಿಯನ್ನು 32 ವರ್ಷದ ಮೊಹಮ್ಮದ್ ಅಯೂಬ್ ಎಂದು ಗುರುತಿಸಲಾಗಿದೆ. ಮದುವೆಯಾಗಿ 3 ಮಕ್ಕಳ ತಂದೆಯಾದರೂ ಲೈಂಗಿಕ ಕಾರ್ಯಕರ್ತೆಯಾಗಿದ್ದ ಲತಾ ಅಲಿಯಾಸ್ ಸಲ್ಮಾಳನ್ನು ಪ್ರೀತಿ ಮಾಡಿ ಮದುವೆಯಾಗುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.
2008ರಲ್ಲಿ ಮದುವೆಯಾಗಿದ್ದ ಅಯೂಬ್ ವೇಶ್ಯಾಗೃಹವೊಂದರಲ್ಲಿ ಲತಾಳನ್ನು ಭೇಟಿ ಮಾಡಿದ್ದಾನೆ. ಅವಳ ಜೊತೆ ವಿವಾಹೇತರ ಸಂಬಂಧ ಇಟ್ಟಿಕೊಂಡು ಈ ಕೆಲಸ ಬಿಟ್ಟು ತನ್ನನ್ನು ಮದುವೆಯಾಗು ಎಂದು ಹೇಳಿದ್ದಾನೆ. ಆದರೆ ವೃತ್ತಿಯಲ್ಲಿ ವೇಶ್ಯೆಯಾಗಿದ್ದ ಲತಾ ನಾನು ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿದ್ದಾಳೆ.
ಇದರಿಂದ ಕೋಪಗೊಂಡ ಅಯೂಬ್ ಆಗಸ್ಟ್ 20ರ ಸಂಜೆ ಲತಾಳನ್ನು ಸುತ್ತಾಡಿಕೊಂಡು ಬರೋಣ ಬಾ ಎಂದು ಬವಾನಾ ಕಾಲುವೆಯ ಬಳಿ ಕರೆದುಕೊಂಡು ಹೋಗಿದ್ದಾನೆ. ನಂತರ ಚಾಕುವಿನಿಂದ ಆಕೆಯ ಗಂಟಲನ್ನು ಸೀಳಿ ಕೊಲೆ ಮಾಡಿ ಶವವನ್ನು ಗುರುತಿಸಲು ಆಗದ ರೀತಿಯಲ್ಲಿ ಐದು ತುಂಡುಗಳಾಗಿ ಕತ್ತರಿಸಿ ಎಸೆದು ಬಂದಿದ್ದಾನೆ.
ಮಹಿಳೆಯ ಶವವನ್ನು ವಶಕ್ಕೆ ಪಡೆದ ಕೈಲಾಶನಾಥ್ ಪೊಲೀಸರು ತನಿಖೆ ಮಾಡಿ ಶುಕ್ರವಾರ ಆರೋಪಿ ಮಹಮ್ಮದ್ ಅಯೂಬ್‍ನನ್ನು ತುರ್ಕಮಾನ್ ಗೇಟ್ ಬಳಿ ಬಂಧಿಸಿದ್ದಾರೆ. ಕೊಲೆಗೆ ಬಳಸಿದ ಕಾರು ಮತ್ತು ಚಾಕುವನ್ನು ವಶಕ್ಕೆ ಪಡೆದಿದ್ದಾರೆ.