ಗಣರಾಜೋತ್ಸವಕ್ಕೆ ರಾಜಪಥದಲ್ಲಿ ಅನುಭವ ಮಂಟಪ

Public TV
1 Min Read
Anubhava Mantapa

ನವದೆಹಲಿ: ಜನವರಿ 26ರ ಗಣರಾಜ್ಯೋತ್ಸವಕ್ಕೆ ದೆಹಲಿಯ ರಾಜಪಥ್‍ದಲ್ಲಿ ನಡೆಯಲಿರುವ ಪರೇಡ್‍ನಲ್ಲಿ ಅನುಭವ ಮಂಟಪ ಸ್ತಬ್ಧಚಿತ್ರ ರಾಜ್ಯವನ್ನು ಪ್ರತಿನಿಧಿಸಲಿದೆ. ದೆಹಲಿಯ ರಂಗಶಾಲೆಯಲ್ಲಿ ಸ್ತಬ್ಧಚಿತ್ರದ ತಯಾರಿ ನಡೆದಿದ್ದು, ಪ್ರದರ್ಶನಕ್ಕೆ ಸಿದ್ಧವಾಗಿದೆ. ಸ್ತಬ್ಧ ಚಿತ್ರದೊಂದಿಗೆ 27 ಕಲಾವಿದರು ಅನುಭವ ಮಂಟಪದ ವಿವಿಧ ಪಾತ್ರಗಳು ಮತ್ತು ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಕಳೆದ ಹನ್ನೊಂದು ವರ್ಷಗಳಿಂದ ರಾಜಪಥ್ ಪರೇಡ್‍ನಲ್ಲಿ ಕರ್ನಾಟಕದ ಸ್ತಬ್ಧ ಚಿತ್ರ ಭಾಗಿಯಾಗುತ್ತಿದ್ದು, ಈ ಬಾರಿ ಅನುಭವ ಮಂಟಪ ವಿಷಯ ವಸ್ತುವಿಗೆ ಕೇಂದ್ರ ರಕ್ಷಣಾ ಇಲಾಖೆ ಒಪ್ಪಿಗೆ ಸೂಚಿಸಿದೆ. 2020ರ ಗಣರಾಜೋತ್ಸವ ಹಿನ್ನೆಲೆ ಲಕ್ಕುಂಡಿ ದೇವಾಲಯ, ಹಾಲಕ್ಕಿ ಒಕ್ಕಲಿಗರು, ಮೆಕ್ಕಿಕಟ್ಟಿ, ಅನುಭವ ಮಂಟಪದ ವಿಷಯ ವಸ್ತುವನ್ನು ಆಯ್ಕೆ ಸಮಿತಿಗೆ ನೀಡಲಾಗಿತ್ತು. ಈ ಪೈಕಿ 12ನೇ ಶತಮಾನದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕ್ರಾಂತಿ ಸೃಷ್ಟಿಸಿದ್ದ ಅನುಭವ ಮಂಟಪ ಸ್ತಬ್ಧ ಚಿತ್ರ ಪ್ರದರ್ಶನಕ್ಕೆ ರಕ್ಷಣಾ ಇಲಾಖೆ ಒಪ್ಪಿಗೆ ಸೂಚಿಸಿತ್ತು.

Anubhava Mantapa A

ಪ್ರದರ್ಶನಗೊಳ್ಳುತ್ತಿರುವ ಅನುಭವ ಮಂಟಪ ಸ್ತಬ್ಧ ಚಿತ್ರ ಕಾಯಕವೇ ಕೈಲಾಸ, ದೇಹವೇ ದೇಗುಲ, ದಯವೇ ಧರ್ಮದ ಮೂಲವಯ್ಯ ಎನ್ನುವ ಮೂರು ಅಂಶಗಳನ್ನು ಒಳಗೊಂಡಿದೆ. ಸ್ತಬ್ಧ ಚಿತ್ರದ ಮುಂಭಾಗದಲ್ಲಿ ಬಸವಣ್ಣನವರ ಪ್ರತಿಕೃತಿ ನಿರ್ಮಿಸಲಾಗಿದೆ. ಹಿಂಭಾಗದಲ್ಲಿ ಅನುಭವ ಮಂಟಪ, ಅದರೊಳಗೆ ಅಕ್ಕಮಹಾದೇವಿ, ಅಲ್ಲಮ ಪ್ರಭು ಸೇರಿ ಕೆಲವು ಪಾತ್ರಗಳನ್ನ ಕಲಾವಿದರು ಅಭಿನಯಿಸಲಿದ್ದಾರೆ.

ಕೆಳಭಾಗದಲ್ಲಿ ಅಕ್ಕನಾಗಮ್ಮ, ಶರಣೆ ಸತ್ಯಕ್ಕ, ಅಂಬಿಗರ ಚೌಡಯ್ಯ, ಮೊಳಿಗೆ ಮಾರಯ್ಯ, ಕಲ್ಯಾಣಮ್ಮ, ಹರಳಯ್ಯ, ಕುಂಬಾರ ಗುಂಡಣ್ಣ ಸಿದ್ಧಾರಾಮೇಶ್ವರ, ಬಾಚಿ ಕಾಯಕದ ಬಸಪ್ಪ ಅವರ ಪ್ರತಿಕೃತಿಗಳನ್ನು ಕಾಣಬಹುದು. ಕಲಾ ನಿರ್ದೇಶಕ ಶಶಿಧರ್ ಹಡಪದ ಅವರ ನೇತೃತ್ವದಲ್ಲಿ 20 ಮಂದಿ ವಿನ್ಯಾಸರು ಸುಮಾರು 45 ಕಾಲದಲ್ಲಿ ಈ ಸ್ತಬ್ಧ ಚಿತ್ರ ತಯಾರಿಸಿದ್ದಾರೆ. ರಾಜಪಥ್ ಪರೇಡ್‍ನಲ್ಲಿ ಕರ್ನಾಟಕವು ಈವರೆಗೂ ಒಮ್ಮೆ ಪ್ರಥಮ, ಎರಡು ಬಾರಿ ದ್ವಿತೀಯ ಹಾಗೂ ಎರಡು ತೃತೀಯ ಬಹುಮಾನ ಗೆದ್ದುಕೊಂಡಿದೆ.

Anubhava Mantapa B

Share This Article
Leave a Comment

Leave a Reply

Your email address will not be published. Required fields are marked *