ನವದೆಹಲಿ: ರಾಷ್ಟ್ರಪತಿ ಭವನದ ಬಳಿ ಡ್ರೋನ್ ಹಾರಾಟ ಮಾಡಿದಕ್ಕೆ ಅಮೆರಿಕಾದ ಇಬ್ಬರು ಪ್ರಜೆಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಡ್ರೋನ್‍ಗಳ ಹಾರಟ ನಿಷೇಧವಾಗಿದ್ದರು, ಅಕ್ರಮವಾಗಿ ರಾಷ್ಟ್ರಪತಿ ಭವನದ ವ್ಯಾಪ್ತಿಯಲ್ಲಿ ಡ್ರೋನ್ ಹಾರಿಸಿದ್ದಕ್ಕೆ ಅಮೆರಿಕಾದ ಅಪ್ಪ ಮಗನನ್ನು ಬಂಧಿಸಲಾಗಿದೆ. ಬಂಧಿತರನ್ನು ಪೀಟರ್ ಜೇಮ್ಸ್ ಲಿನ್ (65) ಮತ್ತು ಮಗ ಗುಯಿಲೌಮ್ ಲೀಡ್ಬೆಟರ್ ಲಿನ್ (30) ಎಂದು ಗುರುತಿಸಲಾಗಿದೆ.
ಪ್ರವಾಸಿ ವೀಸಾದಲ್ಲಿ ಶನಿವಾರ ಅಮೆರಿಕಾದಿಂದ ಭಾರತಕ್ಕೆ ಬಂದ ಈ ಇಬ್ಬರು ರಾಷ್ಟ್ರಪತಿ ಭವನ ಬಳಿ ಡ್ರೋನ್ ಹಾರಿಸಿದ್ದರು. ದೆಹಲಿಯ ಕೇಂದ್ರ ಸಚಿವಾಲಯ ಮತ್ತು ಸಂಸತ್ತಿನ ಬಳಿ ಡ್ರೋನ್ ಹಾರಾಟ ನಡೆಸುತ್ತಿದ್ದರು ಎಂದು ಈ ಇಬ್ಬರನ್ನು ಶನಿವಾರ ಸಂಜೆ ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಡ್ರೋನ್‍ನಲ್ಲಿ ಅಳವಡಿಸಲಾಗಿರುವ ವಿಡಿಯೋ ಕ್ಯಾಮೆರಾದ ಮೂಲಕ ಸೆರೆಹಿಡಿಯಲಾದ ಹೈ-ಸೆಕ್ಯುರಿಟಿ ಸೆಂಟ್ರಲ್ ಸೆಕ್ರೆಟರಿಯಟ್ ಪ್ರದೇಶದ ಕೆಲವು ಛಾಯಾಚಿತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆದರೆ ಅವರ ವಿಚಾರಣೆಯ ಸಮಯದಲ್ಲಿ ನಾವು ಆನ್‍ಲೈನ್ ಪೋರ್ಟಲ್ ಗಾಗಿ ಕೆಲಸ ಮಾಡುತ್ತಿದ್ದು, ಅದಕ್ಕಾಗಿ ವೀಡಿಯೊವನ್ನು ರೆಕಾರ್ಡ್ ಮಾಡುತ್ತಿದ್ದೇವೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ದೆಹಲಿಯಲ್ಲಿ ಡ್ರೋನ್‍ಗಳ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ನಮಗೆ ತಿಳಿದಿಲ್ಲ ಎಂದು ಅವರು ಪೊಲೀಸರಿಗೆ ಹೇಳಿದ್ದಾರೆ. ಅವರ ಬಳಿ ಸದ್ಯಕ್ಕೆ ಅನುಮಾನಾಸ್ಪದವಾಗಿ ಏನೂ ಪತ್ತೆಯಾಗಿಲ್ಲ. ಆದರೆ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.