ನವದೆಹಲಿ: ನಿಲ್ದಾಣಕ್ಕೆ ಎರಡು ರೈಲುಗಳ ತಡವಾಗಿ ಆಗಮನ ಮತ್ತು ಅತಿ ಹೆಚ್ಚು ಟಿಕೆಟ್ ಮಾರಾಟವೇ ನವದೆಹಲಿ ರೈಲು ನಿಲ್ದಾಣಕ್ಕೆ ಕಾಲ್ತುಳಿತ ದುರಂತ ಸಂಭವಿಸಲು ಪ್ರಮುಖ ಕಾರಣವಾಗಿದೆ.
ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳಲು ಹೊರಟ ಭಕ್ತಸಮೂಹದಲ್ಲಿ ಮತ್ತೊಂದು ಕಾಲ್ತುಳಿತ ದುರಂತ ಸಂಭವಿಸಿದೆ. ನವದೆಹಲಿಯ ರೈಲು ನಿಲ್ದಾಣದಲ್ಲಿ ಶನಿವಾರ ತಡರಾತ್ರಿ ಉಂಟಾದ ಕಾಲ್ತುಳಿತದಲ್ಲಿ 18 ಮಂದಿ ಸಾವನ್ನಪ್ಪಿ, 12ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Advertisement
ಘಟನೆಗೆ ಕಾರಣಗಳೇನು?
ರಾತ್ರಿ 9:55ರ ಸುಮಾರಿನಲ್ಲಿ ಪ್ರಯಾಗ್‌ರಾಜ್‌ಗೆ ಹೊರಡಬೇಕಿದ್ದ ಸ್ವತಂತ್ರ ಸೇನಾನಿ ಎಕ್ಸ್‌ಪ್ರೆಸ್ ಮತ್ತು ಭುವನೇಶ್ವರ ರಾಜಧಾನಿ ಎಕ್ಸ್‌ಪ್ರೆಸ್ ರೈಲುಗಳ ಪ್ರಯಾಣ ನಿಗದಿತ ಸಮಯಕ್ಕಿಂತ ವಿಳಂಬ ಮಾಡಿದ್ದವು. ಈ ರೈಲುಗಳು ಒಂದರ ಹಿಂದೆ ಒಂದು ಪ್ಲಾಟ್‌ಫಾರ್ಮ್ ನಂಬರ್ 12 ಕ್ಕೆ ಬರಬೇಕಿತ್ತು. ಏಕಾಏಕಿ ಇವುಗಳನ್ನು ಪ್ಲಾಟ್‌ಫಾರ್ಮ್ ನಂಬರ್ 16 ಕ್ಕೆ ಶಿಫ್ಟ್ ಮಾಡಲಾಯಿತು. ಇದರಿಂದ 12 ರಲ್ಲಿ ಕಾಯುತ್ತಿದ್ದ ಜನರು 16 ಕ್ಕೆ ಓಡಲು ಆರಂಭಿಸಿದರು.
Advertisement
ಇದೇ ಅವಧಿಯಲ್ಲಿ 12, 13, 14ನೇ ಪ್ಲಾರ್ಟ್ಫಾರ್ಮ್ ಮೇಲೆ ನಿಯಂತ್ರಿಸಲಾಗದಷ್ಟು ಪ್ರಮಾಣದಲ್ಲಿ ಜನರು ತುಂಬಿದ್ದರು. ಇನ್ನಷ್ಟು ಭಕ್ತರು ನಿಲ್ದಾಣದೊಳಗೆ ಬರುತ್ತಿರುವಾಗ ಎಸ್ಕಲೇಟರ್ ಬಳಿ ಕಾಲ್ತುಳಿತ ಸಂಭವಿಸಿದೆ. ಈ ವೇಳೆ ಒಬ್ಬರ ಮೇಲೆ ಒಬ್ಬರು ಬಿದ್ದ ಕಾರಣ ಸಾವು ಸಂಭವಿಸಿದೆ.
Advertisement
ಇದಲ್ಲದೇ ಪ್ರಯಾಗ್‌ರಾಜ್‌ಗೆ 1,500 ಕ್ಕೂ ಅಧಿಕ ಜನರಲ್ ಟಿಕೆಟ್ ನೀಡಿದ್ದು, ಜನದಟ್ಟನೆ ಹೆಚ್ಚಲು ಕಾರಣ ಎನ್ನಲಾಗಿದೆ. ಜನದಟ್ಟಣೆ ನಿಯಂತ್ರಿಸಲು ಅಗತ್ಯ ರೈಲ್ವೆ ಪೊಲೀಸರು ಸ್ಥಳದಲ್ಲಿ ಇರಲಿಲ್ಲ.
Advertisement
ಆತಂಕಗೊಂಡು ದಿಕ್ಕೆಟ್ಟು ಓಡುತ್ತಿರುವ ಜನರು… ಪ್ಲಾಟ್‌ಫಾರ್ಮ್ ಮೆಟ್ಟಲುಗಳ ಮೇಲೆ ಅಸ್ವಸ್ಥಗೊಂಡು ಉಸಿರು ಚೆಲ್ಲಿರುವ ಮಹಿಳೆಯರು… ಘಟನೆಯ ತೀವ್ರತೆಯನ್ನು ಹೇಳುತ್ತಿರುವ ಚಪ್ಪಲಿಗಳು… ಕಾಲ್ತುಳಿತ ದುರಂತದ ಭಯಾನಕ ದೃಶ್ಯಗಳಿರುವ ವೀಡಿಯೋ ವೈರಲ್ ಆಗಿವೆ.