Connect with us

Latest

ವ್ಯಾಪಕ ಹಿಂಸಾಚಾರ – ದೆಹಲಿ ಗಡಿ ಬಂದ್, ಶಾಂತಿ ಪಾಲನೆ ಮನವಿಗೆ ಮುಂದಾದ ಸರ್ಕಾರ

Published

on

ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ – ವಿರೋಧ ಪ್ರತಿಭಟನೆ ವೇಳೆ ನಡೆಯುತ್ತಿರುವ ಹಿಂಸಾಚಾರ ಕುರಿತು ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಸಭೆ ನಡೆಸಿದ್ದು, ಘರ್ಷಣೆ ವ್ಯಾಪಕವಾದ ಬೆನ್ನಲ್ಲೆ ತುರ್ತು ಕ್ರಮಗಳನ್ನು ತೆಗೆದುಕೊಳ್ಳಲು ಗೃಹ ಇಲಾಖೆ ನಿರ್ಧರಿಸಿದೆ.

ಸಭೆಯಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ಗುಪ್ತಚರ ಇಲಾಖೆ ನಿರ್ದೇಶಕ ಅರವಿಂದ ಕುಮಾರ್, ದೆಹಲಿ ಪೊಲೀಸ್ ಆಯುಕ್ತ ಅಮೂಲ್ಯ ಪಟ್ನಾಯಕ್, ಕಾಂಗ್ರೆಸ್ ಮುಖಂಡ ಸುಭಾಷ್ ಮಲ್ಹೋತ್ರಾ, ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಸಭೆಯಲ್ಲಿ ಭಾಗಿಯಾಗಿದ್ದರು.

ಸೋಮವಾರ ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರದಲ್ಲಿ ಓರ್ವ ಮುಖ್ಯಪೇದೆ ಸೇರಿದಂತೆ 7 ಮಂದಿ ಬಲಿಯಾಗಿದ್ದಾರೆ. ಹಲವು ಕಟ್ಟಡಗಳಿಗೆ ಬೆಂಕಿ ಹಚ್ಚಲಾಗಿದೆ. ಈ ಹಿನ್ನೆಲೆ ಅಮಿತ್ ಶಾ ಅವರು ಸಭೆ ನಡೆಸಿ ಚರ್ಚೆ ನಡೆಸಿದರು. ಗೃಹ ಸಚಿವರ ಭೇಟಿ ಬಳಿಕ ಸಿಎಂ ಅರವಿಂದ್ ಕೇಜ್ರಿವಾಲ್, ಅಧಿಕಾರಿಗಳ ಸಭೆ ನಡೆಸಿದರು.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಕೇಜ್ರಿವಾಲ್, ಇತರೆ ರಾಜ್ಯಗಳಿಂದ ದೆಹಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಇದರಿಂದ ಹಿಂಸಾಚಾರ ಇನ್ನಷ್ಟು ಹೆಚ್ಚಾಗಬಹುದು. ಹೀಗಾಗಿ ದೆಹಲಿಯ ಗಡಿಗಳನ್ನು ಮುಚ್ಚಲು ಸೂಚನೆ ನೀಡಿದರು. ಗಲಭೆಗಳಲ್ಲಿ ಭಾಗಿಯಾಗುವ ಗಲಭೆಕೋರರ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಅಷ್ಟೇ ಅಲ್ಲದೇ ದೆಹಲಿಯಲ್ಲಿ ಭುಗಿಲೆದ್ದ ಹಿಂಸಾಚಾರ ಕುರಿತು ತುರ್ತು ವಿಚಾರಣೆಗೆ ದೆಹಲಿ ಹೈಕೋರ್ಟ್ ಸಮ್ಮತಿ ನೀಡಿದೆ. ಬುಧವಾರ ಈ ಬಗ್ಗೆ ವಿಚಾರಣೆ ನಡೆಸಲಿರುವ ದೆಹಲಿ ಹೈಕೋರ್ಟ್, ದೆಹಲಿಯ ಹೊರ ಭಾಗದ ಅಧಿಕಾರಿಗಳಿಂದ ಎಸ್‍ಐಟಿ ತನಿಖೆ ಆಗ್ರಹಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಲಿದೆ. ಈ ಅರ್ಜಿಯಲ್ಲಿ ಸೇನೆಯಿಂದ ದೆಹಲಿಯಲ್ಲಿ ಭದ್ರತೆ ಒದಗಿಸಲು ಮನವಿ ಮಾಡಲಾಗಿದೆ.

ದೇಗುಲಗಳು ಮತ್ತು ಮಸೀದಿಗಳ ಮೈಕ್‍ಗಳಿಂದ ಶಾಂತಿಪಾಲನೆಗೆ ಸಂದೇಶ ಬಿತ್ತರಿಸಲಾಗುವುದು. ಹಿಂಸಾಚಾರ ಪೀಡಿತ ಬೀದಿಗಳಲ್ಲಿ ಸ್ಥಳೀಯ ಶಾಸಕರು ಮತ್ತು ಪೊಲೀಸರು ಸಂಚರಿಸಿ ಶಾಂತಿ ಕಾಪಾಡಲು ಜನರಲ್ಲಿ ಮನವಿ ಮಾಡಲಿದ್ದಾರೆ. ಬೆಂಕಿ ಅನಾಹುತ ಸಂಭವಿಸಿದ ಕಡೆಗೆ ಅಗ್ನಿಶಾಮಕ ವಾಹನಗಳನ್ನು ತುರ್ತಾಗಿ ಕಳುಹಿಸಿಕೊಡಲು ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

Click to comment

Leave a Reply

Your email address will not be published. Required fields are marked *