ಬುಲೆಟ್ ಪ್ರೂಫ್ ಜಾಕೆಟ್ ಕೊಡ್ಲಿಲ್ಲ, ದೇಶಕ್ಕಿಂತ ಪರಿವಾರವೇ ಅವರಿಗೆ ಮುಖ್ಯವಾಗಿತ್ತು : ಕಾಂಗ್ರೆಸ್ ತಿವಿದ ಮೋದಿ

Public TV
3 Min Read
National War Memorial modi 1

ನವದೆಹಲಿ: ಈ ಹಿಂದೆ ಯೋಧರಿಗೆ ಬುಲೆಟ್ ಪ್ರೂಫ್ ಜಾಕೆಟ್ ಇರಲಿಲ್ಲ. ಹಿಂದಿನ ಸರ್ಕಾರಕ್ಕೆ ಸೇನೆ ಮನವಿ ಮಾಡಿದ್ದರೂ ಸರ್ಕಾರ ಕೊಟ್ಟಿರಲಿಲ್ಲ. ಆದರೆ ನಮ್ಮ ಸರ್ಕಾರ 4 ವರ್ಷದಲ್ಲಿ 2 ಲಕ್ಷಕ್ಕೂ ಹೆಚ್ಚು ಬುಲೆಟ್ ಪ್ರೂಫ್ ಜಾಕೆಟ್ ಖರೀದಿ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಯುಪಿಎ ಸರ್ಕಾರವನ್ನು ಟೀಕಿಸಿದ್ದಾರೆ.

ನರೇಂದ್ರ ಮೋದಿ ಅವರು ರಾಷ್ಟ್ರೀಯ ಯುದ್ಧ ಸ್ಮಾರಕ ಲೋಕಾರ್ಪಣೆ ಮಾಡಿ ಯೋಧರಿಗೆ ಅರ್ಪಿಸಿದರು. ದೆಹಲಿಯ ಮೇಜರ್ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂನಲ್ಲಿ ಮಾತನಾಡಿದ ಅವರು ಯೋಧರ ಕೊಡುಗೆಯನ್ನು ನೆನೆದು ಕೊಂಡಾಡಿದರು.

National War Memorial 1

ನಮ್ಮ ಸರ್ಕಾರ ಯೋಧರ ರಕ್ಷಣೆಗೆ ಮುಂದಾಗಿದೆ. ಇದಕ್ಕಾಗಿ ಹೊಸ ಅತ್ಯಾಧುನಿಕ ವಿಮಾನ, ಹೆಲಿಕಾಪ್ಟರ್, ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿ ಮಾಡಿದೆ. ದೇಶ ಮೊದಲಾ ಅಥವಾ ಒಂದು ಕುಟುಂಬ ಮೊದಲೇ ಎಂದು ಪ್ರಶ್ನಿಸಿಬೇಕಿದೆ ಎಂದರು.

ಈ ಹಿಂದಿನ ಸರ್ಕಾರ ಸೇನೆಯನ್ನು ಹೇಗೆ ನೋಡಿಕೊಳ್ಳುತ್ತಿತ್ತು ಎನ್ನುವುದು ತಿಳಿದಿದೆ. ದೇಶಕ್ಕಾಗಿ ಹುತಾತ್ಮರಾದ ಯೋಧರಿಗೆ ಏಕೆ ಈ ರೀತಿಯ ಅನ್ಯಾಯ ಮಾಡಿದ್ದಾರೆ? ಮೊದಲು ಇದ್ದ ಸರ್ಕಾರ ತಮ್ಮ ಅಭಿವೃದ್ಧಿಗೆ ಮಾತ್ರ ಗಮನ ನೀಡಿತ್ತು. ಇದಕ್ಕೆ ಅವರು ಜಾರಿಗೆ ತಂದ ಯೋಜನೆಗಳನ್ನು ಗಮನಿಸಿದರೆ ತಿಳಿಯುತ್ತದೆ. ರಾಷ್ಟ್ರೀಯ ಯೋಧರ ಸ್ಮಾರಕ ನಿರ್ಮಿಸಲು ಕೂಡ ಆಗಿರಲಿಲ್ಲ. ಸೇನೆಯನ್ನು ಮೊದಲು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುತ್ತಿದ್ದರು. ದೇಶಕ್ಕಿಂತ ಅವರಿಗೆ ಪರಿವಾರವೇ, ಮುಖ್ಯವಾಗಿತ್ತು. ರಾಷ್ಟ್ರೀಯ ಯೋಧರ ಸ್ಮಾರಕ ನಿರ್ಮಾಣಕ್ಕೂ ಹೀಗೆ ಹೇಳುತ್ತಿದ್ದರು. ಆದರೆ ಸದ್ಯ ನನಗೆ ಸ್ಮಾರಕ ಉದ್ಘಾಟನೆ ಮಾಡುವ ಅವಕಾಶ ಲಭಿಸಿದೆ ಎಂದು ತಿಳಿಸಿದರು.

ದೇಶದ ಸೈನ್ಯಕ್ಕೆ ಬಲ ತುಂಬಲು ಪ್ರಯತ್ನಿಸಿದರೆ ತಮ್ಮ ಶಕ್ತಿಯನ್ನೆಲ್ಲಾ ಬಳಸಿ ತಡೆ ನೀಡಲು ಬಯಸುತ್ತಿದ್ದಾರೆ. ಇದೇ ಜನರು ದೇಶಕ್ಕೆ ರಫೇಲ್ ಯುದ್ಧ ವಿಮಾನ ಬಾರದಂತೆ ತಡೆಯುತ್ತಿದ್ದಾರೆ. ಆದರೆ ಅವರ ಪ್ರಯತ್ನ ಸಫಲ ಆಗುವುದಿಲ್ಲ. ಮುಂದಿನ ಕೆಲವೇ ದಿನಗಳಲ್ಲಿ ಆಗಸದಲ್ಲಿ ರಫೇಲ್ ಹಾರಾಟ ನಡೆಸಲಿದೆ ಎಂದರು.

ದೇಶ ಸ್ವಾವಲಂಬಿಯಾಗಿ ಮಾಡುವ ಪ್ರಯತ್ನದ ಫಲವಾಗಿ ಅತ್ಯಾಧುನಿಕ ರೈಫಲ್ ಗಳು ಭಾರತದಲ್ಲೇ ತಯಾರಿಸಲಾಗುತ್ತಿದೆ. ಇಲ್ಲಿ ಮೋದಿ ಹೆಸರು ಮುಖ್ಯವಲ್ಲ. ಈ ದೇಶದ ಸಭ್ಯತೆ, ಸಂಸ್ಕೃತಿ, ಇತಿಹಾಸ ಎಲ್ಲಕ್ಕಿಂತ ಎತ್ತರಲ್ಲಿ ಇರುತ್ತದೆ ಎಂದರು.

National War Memorial 3

ತಮ್ಮ ಭಾಷಣದ ಉದ್ದಕ್ಕೂ ಕಾಂಗ್ರೆಸ್ ಪಕ್ಷದ ಹೆಸರು ಪ್ರಸ್ತಾಪಿಸದೆ ಮೋದಿ ವಾಗ್ದಾಳಿ ನಡೆಸಿದರು. ಈ ಹಿಂದೆ ಅಸಾಧ್ಯ ಎಂದು ತಿಳಿದಿದ್ದ ಸಂಗತಿಗಳನ್ನು ನಾವು ಸಾಧ್ಯವಾಗಿಸುತ್ತಿದ್ದೇವೆ. ಜನರು 2014 ರಲ್ಲಿ ಆಶೀರ್ವಾದ ಮಾಡಿದ್ದ ಫಲವಾಗಿ ಕೆಲಸಗಳನ್ನು ಮಾಡಿದ್ದೇವೆ. ದೇಶದ ಅಭಿವೃದ್ಧಿಯೇ ನಮ್ಮ ಗುರಿಯಾಗಿದ್ದು, ಜರ ಪರವಾಗಿ ನಮ್ಮ ಸರ್ಕಾರ ನಿಲ್ಲಲಿದೆ ಎಂದರು.

ವಿಶೇಷತೆ ಏನು?
ಸ್ಮಾರಕದ ಒಳ ಭಾಗದಲ್ಲಿ ನಾಲ್ಕು ಸಮಾನಾಂತರ ವೃತ್ತಗಳನ್ನು ನಿರ್ಮಿಸಿದ್ದು ಅಮರ ಚಕ್ರ, ವೀರ ಚಕ್ರ, ತ್ಯಾಗ ಚಕ್ರ ಹಾಗೂ ಸುರಕ್ಷಾ ಚಕ್ರ ಎಂದು ಹೆಸರಿಡಲಾಗಿದೆ. ಈ ನಾಲ್ಕು ಚಕ್ರದಲ್ಲಿ ದೇಶಕ್ಕಾಗಿ ಮಡಿದ ಭೂ ಸೇನೆಯ 25,539 ವಾಯುಸೇನೆಯ 164 ಹಾಗೂ ನೌಕಾಪಡೆಯ 239 ಯೋಧರ ಹೆಸರನ್ನು ಕೆತ್ತಲಾಗಿದೆ.

MODI WAR MEMORIAL

ಈ ನಾಲ್ಕು ವೃತ್ತಗಳಲ್ಲಿ ಮುಂದಿನ 30 ವರ್ಷಕ್ಕೆ ಹುತಾತ್ಮ ಸೈನಿಕರ ಹೆಸರು ಕೆತ್ತಲು ಸ್ಥಳವನ್ನು ಮೀಸಲಿಡಲಾಗಿದೆ. ಮುಂದಿನ 60 ವರ್ಷಗಳ ಕಾಲ ಹುತಾತ್ಮ ಯೋಧರ ಹೆಸರು ಕೆತ್ತಲು ಪ್ರತ್ಯೇಕ ವೃತ್ತ ನಿರ್ಮಾಣ ಮಾಡಲಾಗಿದೆ. ಪರಮ ವೀರ ಚಕ್ರ ಪಡೆದ ಯೋಧರ ಹೆಸರುಗಳನ್ನು ಪ್ರತ್ಯೇಕವಾಗಿ ಕೆತ್ತಲಾಗಿದೆ. ಗ್ರಾನೈಟ್ ಕಲ್ಲಿನಿಂದ ಹುತಾತ್ಮ ಯೋಧರ ಪ್ರತಿಮೆಗಳನ್ನು ನಿರ್ಮಿಸಿದ್ದು ಮರಳುಗಲ್ಲಿನಿಂದ ಅವುಗಳನ್ನು ಕೋಟ್ ಮಾಡಲಾಗಿದೆ.

14 ಲಕ್ಷ ಲೀಟರ್ ಅಂತರ್ಜಲ ಶೇಖರಣಾ ವ್ಯವಸ್ಥೆ ಮಾಡಿದ್ದು ಮರಳುಗಲ್ಲು ತಣ್ಣಗೆ ಹಾಗೂ ಸುತ್ತಲಿನ ಹಸಿರು ಒಣಗದಂತೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹುತಾತ್ಮ ಯೋಧರ ಹೆಸರಿನ ಹುಡುಕಾಟಕ್ಕಾಗಿ ಡಿಜಿಟಲ್ ಸರ್ಚಿಂಗ್ ವ್ಯವಸ್ಥೆ ಮಾಡಲಾಗಿದೆ. ವಿಶ್ವದ ಅತಿ ಎತ್ತರದ ಸರ್ದಾರ್ ವಲ್ಲಭಭಾಯಿ ಪಟೇಲ್ ಪ್ರತಿಮೆ ವಿನ್ಯಾಸಕ ಶ್ರೀರಾಮ್ ಸುತಾರ್ ಮ್ಯೂಸಿಯಂನಲ್ಲಿ ಆರು ಪ್ರತಿಮೆಗಳನ್ನು ನಿರ್ಮಿಸಿದ್ದಾರೆ.

War Memorial 2

ನವದೆಹಲಿಯ ಇಂಡಿಯಾ ಗೇಟ್ ಬಳಿ ನಿರ್ಮಿಸಲಾಗಿರುವ ಈ ಸ್ಮಾರಕ ದೇಶದ ಮೊದಲ ವಾರ್ ಮ್ಯೂಸಿಯಂ ಆಂಡ್ ಮೆಮೋರಿಯಲ್ ಆಗಿದ್ದು ದೇಶಕ್ಕಾಗಿ ಹೋರಾಡಿ ಮಡಿದ ಯೋಧರಿಗೆ ಇದನ್ನು ಸಮರ್ಪಿಸಲಾಗಿದೆ. ಸುಮಾರು 176 ಕೋಟಿ ರೂಪಾಯಿ ವೆಚ್ಚದಲ್ಲಿ ಹೈದರಾಬಾದ್ ಕಂಪನಿಯೊಂದು ಈ ಕಾಮಗಾರಿಯನ್ನು ಪೂರ್ಣಗೊಳಿಸಿದ್ದು ಉನ್ನತ ತಂತ್ರಜ್ಞಾನ ಮತ್ತು ಹಲವು ವಿಶೇಷತೆಗಳಿಂದ ಮ್ಯೂಸಿಯಂ ಕಟ್ಟಲಾಗಿದೆ. ರಾಷ್ಟ್ರಪತಿ ಭವನ ಮತ್ತು ಇಂಡಿಯಾ ಗೇಟ್ ಸಮಾನಾಂತರವಾಗಿ ಮ್ಯೂಸಿಯಂ ನಿರ್ಮಾಣವಾಗಿದ್ದು ಈ ಎರಡು ಪ್ರದೇಶಗಳಲ್ಲಿ ನಿಂತರೂ ವಾರ್ ಮ್ಯೂಸಿಯಂನ ಅಮರ್ ಜವಾನ್ ಜ್ಯೋತಿಯ ಅಶೋಕ ಸ್ತಂಭ ಕಾಣಲಿದೆ.

https://www.youtube.com/watch?v=ioxYSDmcxC4

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *