ಪ್ರಧಾನಿ ಮೋದಿ ಸರಣಿ ಸಭೆ – ಲಾಕ್‍ಡೌನ್ ವಿಸ್ತರಣೆ ಬೆನ್ನಲ್ಲೇ ವಿಶೇಷ ಪ್ಯಾಕೇಜ್ ಘೋಷಣೆ ಸಾಧ್ಯತೆ

Public TV
1 Min Read
modi meeting 1

ನವದೆಹಲಿ: ಮೇ 17ರವರೆಗೂ ಲಾಕ್‍ಡೌನ್ ವಿಸ್ತರಣೆ ಮಾಡಿದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಸಚಿವರು ಹಾಗೂ ಪ್ರಮುಖ ಅಧಿಕಾರಿಗಳ ಜೊತೆಗೆ ಸರಣಿ ಸಭೆಗಳನ್ನು ನಡೆಸಿದ್ದಾರೆ. ಹೀಗಾಗಿ ಆರ್ಥಿಕ ಉತ್ತೇಜನಕ್ಕೆ ಮತ್ತೊಂದು ಆರ್ಥಿಕ ಪ್ಯಾಕೇಜ್ ಬಿಡುಗಡೆ ಮಾಡಬಹುದು ಎಂದು ಮೂಲಗಳು ಹೇಳುತ್ತಿವೆ.

ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ, ಹಣಕಾಸು ಸಚಿವೆ ನಿರ್ಮಲ ಸೀತರಾಮನ್, ಅತಿ ಸಣ್ಣ, ಸಣ್ಣ ಹಾಗೂ ಮದ್ಯಮ ಉದ್ದಿಮೆಗಳ ಸಚಿವರು, ಕೃಷಿ ಇಲಾಖೆಯ ಅಧಿಕಾರಿಗಳ ಜೊತೆಗೆ ನರೇಂದ್ರ ಮೋದಿ ವಿಸ್ತ್ರತ ಚರ್ಚೆ ನಡೆಸಿದ್ದಾರೆ. ಸಭೆ ಹಿನ್ನೆಲೆ ಶುಕ್ರವಾರದಂದು ಮಾಸಿಕ ಜಿಎಸ್‍ಟಿ ಸಂಗ್ರಹ ಸಂಖ್ಯೆಯ ಮಾಹಿತಿ ನೀಡುವುದನ್ನು ಕೇಂದ್ರ ಹಣಕಾಸು ಸಚಿವಾಲಯವು ಮುಂದೂಡಿತ್ತು. ಈಗ ದೇಶದ ಆರ್ಥಿಕತೆಯನ್ನು ಉತ್ತೇಜಿಸಲು ಯೋಜಿಸಿರುವ ಹಲವಾರು ಉಪಕ್ರಮಗಳ ಬಗ್ಗೆ ನಿರ್ಮಲ ಸೀತರಾಮನ್ ಪ್ರಧಾನಿ ಅವರಿಗೆ ವಿವರಣೆ ನೀಡಿದ್ದಾರೆ ಎನ್ನಲಾಗಿದೆ.

Modi meeting

ಈಗಾಗಲೇ ನಾಗರಿಕ ವಿಮಾನಯಾನ, ಕಾರ್ಮಿಕ ಹಾಗೂ ವಿದ್ಯುತ್ ಸೇರಿದಂತೆ ವಿವಿಧ ಸಚಿವಾಲಯದೊಂದಿಗೆ ಚರ್ಚೆ ನಡೆಸಲಾಗಿದೆ. ದೇಶಿ, ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವುದು ಮತ್ತು ದೇಶದಲ್ಲಿ ಸಣ್ಣ ಉದ್ಯಮಗಳಿಗೆ ಪುನರುಜ್ಜೀವನ ನೀಡುವ ಬಗ್ಗೆ ವಾಣಿಜ್ಯ ಹಾಗೂ ಎಂಎಸ್‍ಎಂಇ ಸಚಿವಾಲಯದೊಂದಿಗೆ ವಿಸೃತವಾದ ಚರ್ಚೆ ನಡೆಸಲಾಗಿದೆ.

ಮಾರ್ಚ್ ತಿಂಗಳ ಅಂತ್ಯದಲ್ಲಿ ಕೇಂದ್ರ ಸರ್ಕಾರವು 1.7 ಲಕ್ಷ ಕೋಟಿ ರೂಪಾಯಿಗಳ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಿತ್ತು. ಈ ಪ್ಯಾಕೇಜ್‍ನಲ್ಲಿ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಅನೇಕ ಯೋಜನೆಗಳನ್ನು ಪ್ರಕಟಿಸಲಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರದ ಎರಡನೇ ಪ್ಯಾಕೇಜ್‍ನಲ್ಲಿ ಆರ್ಥಿಕತೆ ಚೇತರಿಕೆಗೆ ಟಾನಿಕ್ ನೀಡಬಹುದು ಎಂದು ಅಂದಾಜಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *