ನವದೆಹಲಿ: ಮೇ 3ರ ಬಳಿಕ ಲಾಕ್‍ಡೌನ್ ವಿಸ್ತರಣೆ ಮಾಡುವಂತೆ ದೆಹಲಿ ಬಳಿಕ ಐದು ರಾಜ್ಯಗಳು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಂಡಿದೆ. ನಾಳೆ ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಸಭೆ ಹಿನ್ನೆಲೆಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.
ಮೇ 3ರ ಬಳಿಕ ಲಾಕ್‍ಡೌನ್ ವಿಸ್ತರಣೆ ಬಗ್ಗೆ ಗೊಂದಲದಲ್ಲಿರುವ ಕೇಂದ್ರ ಸರ್ಕಾರ ಈ ಬಗ್ಗೆ ಎಲ್ಲ ರಾಜ್ಯಗಳ ಸಿಎಂಗಳ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ. ನಾಳೆ ಬೆಳಗ್ಗೆ ವಿಡಿಯೋ ಕಾನ್ಫೆರೆನ್ಸ್ ಮೂಲಕ ಈ ಸಭೆ ನಡೆಯಲಿದೆ.
ನಾಳಿನ ಸಭೆಗೂ ಮುನ್ನ ಮಹಾರಾಷ್ಟ್ರ, ಮಧ್ಯಪ್ರದೇಶ, ಪಂಜಾಬ್, ಒಡಿಶಾ, ಪಶ್ಚಿಮ ಬಂಗಾಳ ಲಾಕ್‍ಡೌನ್ ವಿಸ್ತರಣೆ ಮಾಡುವಂತೆ ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿವೆ. ನಾಳಿನ ಸಭೆಯಲ್ಲೂ ಇದೇ ಅಂಶವನ್ನು ಒತ್ತಿ ಹೇಳುವ ಪ್ರಯತ್ನವಾಗಲಿದೆ. ಲಾಕ್‍ಡೌನ್ ಮುಂದುವರಿಸುವುದು ಸೂಕ್ತ ಹಂತ ಹಂತವಾಗಿ ವಿನಾಯಿತಿ ನೀಡಬೇಕು. ರಾಜ್ಯದ ಹಲವು ಪ್ರದೇಶದಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದ್ದು ಲಾಕ್‍ಡೌನ್ ತೆರವು ಒಳಿತಲ್ಲ ಎಂದು ಆಯಾ ರಾಜ್ಯದ ಸಿಎಂಗಳು ಅಭಿಪ್ರಾಯಪಟ್ಟಿದ್ದಾರೆ.
ಗುಜರಾತ್, ಆಂಧ್ರಪ್ರದೇಶ, ತಮಿಳುನಾಡು, ಹರಿಯಾಣ, ಹಿಮಾಚಲ ಪ್ರದೇಶ ಮತ್ತು ಕರ್ನಾಟಕ ಇತರ ಆರು ರಾಜ್ಯಗಳು ಕೇಂದ್ರ ಸರ್ಕಾರದ ನಿರ್ದೇಶನವನ್ನು ಅನುಸರಿಸುವುದಾಗಿ ಹೇಳಿದ್ದು, ಅಸ್ಸಾಂ, ಕೇರಳ ಮತ್ತು ಬಿಹಾರ ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರ ವಿಡಿಯೋ ಸಮಾವೇಶದ ನಂತರ ಮುಂದಿನ ನಿರ್ಧಾರವನ್ನು ಪ್ರಕಟಿಸುವುದಾಗಿ ಹೇಳಿದ. ಈ ನಡುವೆ ತೆಲಂಗಾಣ ಮೇ 7ರವರೆಗೂ ಲಾಕ್‍ಡೌನ್ ವಿಸ್ತರಿಸಿದೆ.
ಮಹಾರಾಷ್ಟ್ರ ಕೇಂದ್ರ ಸರ್ಕಾರ ನೀಡಿರುವ ವಿನಾಯಿತಿಗಳನ್ನು ರಾಜ್ಯದಲ್ಲಿ ನೀಡುವುದಿಲ್ಲ ಎಂದಿದ್ದು, ಉತ್ತರ ಪ್ರದೇಶ ಮತ್ತಷ್ಟು ದಿನ ಕಾದು ನೋಡುವ ಪ್ರಯತ್ನ ಮಾಡಿದೆ. ತುರ್ತು ಅವಶ್ಯಕ ಅಂಗಡಿಗಳು ಮತ್ತು 11 ಬಗೆಯ ಕೈಗಾರಿಗಳಿಗೆ ಮಾತ್ರ ಅವಕಾಶ ನೀಡಿದೆ. ಪಿಎಂ ಸಭೆಗೂ ಮುನ್ನ ಬಿಜೆಪಿ ಹೊರತಾದ ಪಶ್ಚಿಮ ಬಂಗಾಳ, ಪಂಜಾಬ್, ಮಹಾರಾಷ್ಟ್ರ ಮತ್ತು ಒಡಿಶಾ ಲಾಕ್‍ಡೌನ್ ವಿಸ್ತರಣೆಗೆ ಒಲವು ತೋರಿಸುವುದು ಮಹತ್ವ ಪಡೆದುಕೊಂಡಿದೆ.