ನವದೆಹಲಿ: ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ ಶಿವಕುಮಾರ್ ನೇಮಕ ಮಾಡಿರುವ ಎಐಸಿಸಿ ನಡೆ ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್ ಹೀರೆಮಠ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಳಂಕ ರಹಿತ ವ್ಯಕ್ತಿಗಳಿಗೆ ಉನ್ನತ ಹುದ್ದೆಗಳನ್ನು ನೀಡುವಂತೆ ಅವರು ಒತ್ತಾಯಿಸಿದ್ದಾರೆ.
ನವದೆಹಲಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷರ ನೇಮಕ ವಿಚಾರದಲ್ಲಿ ಎಐಸಿಸಿ ತಪ್ಪು ನಿರ್ಧಾರ ತೆಗೆದುಕೊಂಡಿದೆ. ಡಿ.ಕೆ ಶಿವಕುಮಾರ್ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಬಾರದಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಡಿಕೆಶಿ ವಿರುದ್ಧ ಬೆನ್ನಿಗಾನಳ್ಳಿ ಕೇಸ್ ಸೇರಿ ಕೋಟ್ಯಂತರ ರೂ.ಗಳ ಅಕ್ರಮ ಹಗರಣಗಳ ಆರೋಪ ಇದೆ. ಈಗಾಗಲೇ ಒಮ್ಮೆ ಜೈಲಿಗೆ ಹೋಗಿ ಬಂದಿದ್ದಾರೆ ಎಂದರು.
ಡಿಕೆಶಿ ವಿರುದ್ಧದ ಹಲವು ಕೇಸುಗಳು ಕೋರ್ಟ್ ನಲ್ಲಿ ವಿಚಾರಣೆ ಹಂತದಲ್ಲಿದೆ. ಮುಂದೇ ಏನು ಬೇಕಾದರೂ ಆಗಬಹುದಾದ ಸಾಧ್ಯತೆಗಳಿದೆ. ಈ ನಡುವೆ ಅವರಿಗೆ ಕೆಪಿಸಿಸಿ ಅಧ್ಯಕ್ಷರನ್ನ ಮಾಡಿರುವುದು ಸರಿಯಲ್ಲ. ಕಳಂಕಿತರಿಗೆ ಅವಕಾಶ ನೀಡದೆ ಎಐಸಿಸಿ ಹೊಸ ರಾಜಕಾರಣಕ್ಕೆ ನಾಂದಿ ಹಾಡಬೇಕು. ಕೂಡಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಡಿಕೆಶಿ ವಜಾ ಮಾಡುವಂತೆ ಹೀರೆಮಠ್ ಆಗ್ರಹಿಸಿದರು.