ನವದೆಹಲಿ: ನಾಕೌಟ್ ಹಂತಕ್ಕೆ ತಲುಪಬೇಕಾದರೆ ಗೆಲುವು ಅನಿವಾರ್ಯ ಆಗಿರುವ ಕರ್ನಾಟಕಕ್ಕೆ ದೆಹಲಿಯಲ್ಲಿ ಮಂದ ಬೆಳಕು ಶತ್ರುವಾಗಿದೆ. ಮೊದಲ ದಿನ ಅರ್ಧಕ್ಕೆ ಮೊಟಕುಗೊಂಡಿದ್ದ ರೈಲ್ವೇಸ್ ವಿರುದ್ಧದ ಪಂದ್ಯದಲ್ಲಿ, ಎರಡನೇ ದಿನವೂ ಮಂದ ಬೆಳಕಿನಿಂದ ಆಟ ಅರ್ಧಕ್ಕೆ ನಿಂತಿದೆ. ಎರಡನೇ ದಿನವೂ ಸಂಪೂರ್ಣ ಓವರ್ ಕಾಣದೆ ಪಂದ್ಯ ಅರ್ಧಕ್ಕೆ ಮೊಟಕುಗೊಂಡಿದ್ದು, ರೈಲ್ವೇಸ್‍ಗೆ ವರದಾನವಾಗಿದೆ.
ನಿನ್ನೆ ಕೇವಲ 49 ಓವರ್ ಕಂಡಿದ್ದ ಪಂದ್ಯ ಎರಡನೇ ದಿನವಾದ ಇಂದು ಕೂಡಾ ಕ್ರೀಡಾಂಗಣದಲ್ಲಿ ತೇವಾಂಶ ಹಿನ್ನಲೆಯಲ್ಲಿ ತಡವಾಗಿ ಪಂದ್ಯ ಪ್ರಾರಂಭ ಆಯ್ತು. ಇಂದು ಕೂಡಾ ಕೇವಲ 23 ಓವರ್ ಮಾತ್ರ ಬೌಲಿಂಗ್ ಮಾಡಲು ಸಾಧ್ಯವಾಯ್ತು. ನಿನ್ನೆ 98 ರನ್ ಗೆ 6 ವಿಕೆಟ್ ಕಳೆದುಕೊಂಡಿದ್ದ ರೈಲ್ವೇಸ್ ತಂಡ ಇಂದು ಉತ್ತಮ ಬ್ಯಾಟಿಂಗ್ ನಡೆಸಿತು. ಅರಿಂದಮ್ ಘೋಷ್ ಅರ್ಧ ಶತಕದ 50* (155 ಬಾಲ್ 7 ಬೌಂಡರಿ) ಹಾಗೂ ಅವಿನಾಶ್ ಯಾದವ್ ಅರ್ಧ ಶತಕ 62 (143 ಬಾಲ್, 10 ಬೌಂಡರಿ) ನೆರವಿನಿಂದ ಎರಡನೇ ದಿನದ ಅಂತ್ಯಕ್ಕೆ 72 ಓವರ್ ಗೆ 7 ವಿಕೆಟ್ ಕಳೆದುಕೊಂಡು 160 ರನ್ ಗಳಿಸಿದೆ.
ನಿನ್ನೆ ಕರ್ನಾಟಕದ ಬೌಲರ್ ಗಳು ಉತ್ತಮ ದಾಳಿ ನಡೆಸಿದರು. ಇವತ್ತು 23 ಓವರ್ ಮಾಡಿ ಕೇವಲ ಒಂದು ವಿಕೆಟ್ ಮಾತ್ರ ಪಡೆಯಲು ಸಾಧ್ಯವಾಯಿತು. ಅರಿಂದಮ್ ಘೋಷ್ ಹಾಗೂ ಅವಿನಾಶ್ ಯಾದವ್ ಕರ್ನಾಟಕದ ಬೌಲರ್ ಗಳನ್ನು ಕಾಡಿದರು. ಕರ್ನಾಟಕದ ಪರ ರೋನಿತ್ ಮೋರೆ ಒಂದು ವಿಕೆಟ್ ಮಾತ್ರ ಪಡೆದರು. ಇನ್ನೆರಡು ದಿನ ಮಾತ್ರ ಆಟ ಉಳಿದಿದ್ದು ಈ ಪಂದ್ಯ ಫಲಿತಾಂಶ ಕಾಣೋದು ಡೌಟ್ ಆಗಿದೆ. ಹೀಗಾಗಿ ಕರ್ನಾಟಕಕ್ಕೆ ಇದು ಹಿನ್ನಡೆಯಾಗೋ ಸಾಧ್ಯತೆ ಇದೆ.