ನವದೆಹಲಿ: ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸ್ವಂತ ಮಗನೇ ತಂದಯೇ ವಿರುದ್ಧ ದೂರು ನೀಡಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
30 ವರ್ಷದ ಅಭಿಷೇಕ್ ತನ್ನ ತಂದೆ ವೀರೇಂದ್ರ ಸಿಂಗ್ (59) ವಿರುದ್ಧ ದೂರು ನೀಡಿದ್ದಾರೆ. ಲಾಕ್‍ಡೌನ್ ಸಮಯದಲ್ಲೂ ನಮ್ಮ ತಂದೆ ಹೊರಗೆ ಹೋಗುತ್ತಾರೆ. ಲಾಕ್‍ಡೌನ್ ನಿಯಮಗಳನ್ನು ಪಾಲಿಸುವುದಿಲ್ಲ ಮತ್ತು ನಮ್ಮ ಏರಿಯಾದಲ್ಲಿ ಸುಮ್ಮನೆ ಓಡಾಡುತ್ತಾರೆ ಎಂದು ವಸಂತ್ ಕುಂಜ್ ದಕ್ಷಿಣ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ತಂದೆ ವಿರುದ್ಧ ದೂರು ನೀಡಿದ ಅಭಿಷೇಕ್ ಆಟೋಮೊಬೈಲ್ ಕಂಪನಿಯಲ್ಲಿ ಕೆಲಸ ಮಾಡುತ್ತಾರೆ. ಅಭಿಷೇಕ್ ರಾಜೋಕರಿ ಪ್ರದೇಶದಲ್ಲಿ ತನ್ನ ಕುಟುಂಬದೊಂದಿಗೆ ವಾಸವಿದ್ದಾರೆ. ಈ ವೇಳೆ ಲಾಕ್‍ಡೌನ್ ವೇಳೆ ಮನೆಯಲ್ಲೇ ಇರಿ ಎಂದು ಹೇಳಿದರು ಕೇಳದ ಅವರ ತಂದೆ ಏರಿಯಾ ತುಂಬ ಓಡಾಡುತ್ತಿರುತ್ತಾರಂತೆ. ಇದನ್ನು ಕಂಡು ಬೇಸತ್ತ ಅಭಿಷೇಕ್ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಮೂಲಕ ಅಭಿಷೇಕ್ ತಂದೆ ವಿರುದ್ಧ ಪ್ರಥಮ ಮಾಹಿತಿ ವರದಿ ಸಲ್ಲಿಕೆಯಾಗಿದೆ.
ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಕಾರಣ ಮಾರ್ಚ್ 24ರಂದು ದೇಶವನ್ನು ಉದ್ದೇಶಿ ಮಾತನಾಡಿದ್ದ ಪ್ರಧಾನಿ ಮೋದಿ ಅವರು, ದೇಶವನ್ನು 21 ದಿನಗಳ ಕಾಲ ಲಾಕ್‍ಡೌನ್ ಮಾಡಿದ್ದರು. ಜೊತೆಗೆ ಮನೆಯಿಂದ ಯಾರೂ ಹೊರೆಗೆ ಬರಬೇಡಿ ಎಂದು ಸೂಚಿಸಿದ್ದರು. ಆದರೂ ಕೆಲವರು ಮನೆಯಿಂದ ಹೊರಗೆ ಬಂದು ಪೊಲೀಸರ ಕೈಯಲ್ಲಿ ಲಾಠಿ ಏಟು ತಿನ್ನುತ್ತಿದ್ದಾರೆ.
ಮೊದಲಿಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ಚೀನಾದಲ್ಲಿ ಕಾಣಿಸಿಕೊಂಡ ಕೊರೊನಾ ವೈರಸ್ ಇಂದು ವಿಶ್ವಕ್ಕೆ ಮಹಾಮಾರಿಯಾಗಿ ಭೀತಿಯನ್ನು ತರಿಸಿದೆ. ಆಗಾಲೇ ಈ ಮಹಾಮಾರಿಗೆ ಭಾರತದಲ್ಲಿ 50ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. 2500ಕ್ಕೂ ಹೆಚ್ಚು ಜನರಿಗೆ ಸೋಂಕು ತಗುಲಿದೆ.