ನವದೆಹಲಿ: ಅಕ್ರಮ ಹಣ ವರ್ಗಾವಣೆ ಬೇನಾಮಿ ಆಸ್ತಿ ಗಳಿಕೆ ಆರೋಪ ಹೊತ್ತು ತಿಹಾರ್ ಜೈಲು ಸೇರಿರುವ ಮಾಜಿ ಸಚಿವ ಶಾಸಕ ಡಿ.ಕೆ ಶಿವಕುಮಾರ್ ಸಲ್ಲಿಸಿರುವ ಜಾಮೀನು ಅರ್ಜಿ ಸೋಮವಾರ ವಿಚಾರಣೆಗೆ ಬರಲಿದೆ.
ಸೋಮವಾರ ಬೆಳಗ್ಗೆ ದೆಹಲಿ ಹೈಕೋರ್ಟ್ ನ ನ್ಯಾ.ಸುರೇಶ್ ಕುಮಾರ್ ಕೈಟಾ ನೇತೃತ್ವದ ಏಕ ಸದಸ್ಯ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಲಿದೆ. ಈ ಹಿಂದೆ ವಿಚಾರಣೆ ನಡೆಸಿದ್ದ ಪೀಠ ದಸರಾ ಹಬ್ಬದ ಹಿನ್ನೆಲೆ ವಿಚಾರಣೆಯನ್ನು ಮುಂದೂಡಲಾಗಿತ್ತು. ಇಡಿ ವಿಶೇಷ ನ್ಯಾಯಾಲಯ ಜಾಮೀನು ರದ್ದು ಮಾಡಿದ್ದ ಆದೇಶ ಪ್ರಶ್ನಿಸಿ ಡಿ.ಕೆ ಶಿವಕುಮಾರ್ ಸಲ್ಲಿಸಿದ್ದ ಅರ್ಜಿಯ ಸುಧೀರ್ಘ ವಿಚಾರಣೆ ಆಲಿಸಲಿದೆ.
ಅರ್ಜಿ ವಿಚಾರಣೆ ಹಿನ್ನೆಲೆ ಈಗಾಗಲೇ ಸಾಕಷ್ಟು ತಯಾರಿ ಮಾಡಿಕೊಂಡಿರುವ ಡಿ.ಕೆ ಶಿವಕುಮಾರ್ ಪರ ವಕೀಲರು ಮೊದಲು ವಾದ ಮಂಡಿಸಲಿದ್ದಾರೆ. ಈಗಾಗಲೇ ಡಿ.ಕೆ ಶಿವಕುಮಾರ್ 28 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿದ್ದು ಜೈಲಿನಲ್ಲೂ ಎರಡು ದಿನ ಇಡಿ ಅಧಿಕಾರಿಗಳು ವಿಚಾರಣೆ ನಡಿಸಿದ್ದಾರೆ. ಈ ಮೂಲಕ ಒಟ್ಟು 21 ದಿನಗಳ ಕಾಲ ವಿಚಾರಣೆ ನಡೆದಿದೆ. ಡಿ.ಕೆ ಶಿವಕುಮಾರ್ ತಮ್ಮ ಅನಾರೋಗ್ಯದ ನಡುವೆಯೂ ಬಹುತೇಕ ತನಿಖೆಗೆ ಸ್ಪಂದಿಸಿದ್ದಾರೆ. ಪ್ರಕರಣ ಇತರೇ ಎಲ್ಲ ಆರೋಪಿಗಳ ವಿಚಾರಣೆಯೂ ಅಂತ್ಯಕ್ಕೆ ಬಂದಿದ್ದು ಇನ್ನು ಡಿ.ಕೆ ಶಿವಕುಮಾರ್ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇಡುವ ಅವಶ್ಯಕತೆ ಇಲ್ಲ ಎಂದು ಕೋರ್ಟಿಗೆ ಮನವಿ ಮಾಡಲಿದ್ದಾರೆ.
ಅಂದೇ ಇಡಿ ಪರ ವಕೀಲರು ವಾದ ಮಂಡಿಸುವ ಸಾಧ್ಯತೆ ಇದ್ದು ಹೆಚ್ಚುವರಿ ತನಿಖಾ ವರದಿಯನ್ನು ಹೈ ಕೋರ್ಟ್ ಮುಂದೆ ಇಡಲಿದ್ದು ಜಾಮೀನು ನೀಡದಂತೆ ಮನವಿ ಮಾಡಲಿದ್ದಾರೆ ಎನ್ನಲಾಗಿದೆ. ಪ್ರಕರಣ ಸಂಬಂಧ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಸಂಸದ ಡಿ.ಕೆ.ಸುರೇಶ್, ಆಪ್ತ ಸುನೀಲ್ ಕುಮಾರ್ ಶರ್ಮಾ ಮತ್ತು ಪುತ್ರಿ ಐಶ್ವರ್ಯ ವಿಚಾರಣೆ ನಡೆಸಲಾಗಿದ್ದು ಮಾಜಿ ಶಾಸಕ ಕೆ.ಎನ್ ರಾಜಣ್ಣ ವಿಚಾರಣೆ ಬಾಕಿ ಇದೆ. ಸಾಕಷ್ಟು ದೊಡ್ಡ ಮಟ್ಟದ ಅವ್ಯವಹಾರ ನಡೆದಿರುವ ಬಗ್ಗೆ ಮತ್ತು ಅಕ್ರಮ ಹಣ ವರ್ಗಾವಣೆ ಬಗ್ಗೆ ದಾಖಲೆಗಳನ್ನು ಕೋರ್ಟ್ ಮುಂದೆ ಇಡಿ ಇಡಲಿದ್ದು ಸಾಕ್ಷಿ ನಾಶದ ಭೀತಿ ಹಿನ್ನೆಲೆ ಪ್ರಕರಣ ತನಿಖೆ ಅಂತ್ಯವಾಗುವರೆಗೂ ಜಾಮೀನು ನೀಡಿದಂತೆ ಇಡಿ ಪರ ವಕೀಲರು ಮನವಿ ಮಾಡುವ ಸಾಧ್ಯತೆಗಳಿವೆ.