– ಈ ಹಿಂದೆ 2 ಬಾರಿ ಸ್ತಬ್ಧವಾಗಿದ್ದ ಕ್ರಿಕೆಟ್ ಜಗತ್ತು
– ಪ್ರಪಂಚದಲ್ಲಿ ಕ್ರಿಕೆಟ್ ನಿಂತಿದ್ದರು ಅಂದು ಭಾರತದಲ್ಲಿ ನಿಂತಿರಲಿಲ್ಲ
ನವದೆಹಲಿ: ಕೊರೊನಾ ಮಹಾಮಾರಿಯಿಂದ ವಿಶ್ವದಾದ್ಯಂತ ಎಲ್ಲಾ ಕ್ಷೇತ್ರಗಳು ನೆಲಕಚ್ಚಿವೆ. ಈ ವೈರಸ್ ಅರ್ಭಟಕ್ಕೆ ಕ್ರೀಡಾ ಕ್ಷೇತ್ರ ತತ್ತರಿಸಿ ಹೋಗಿದೆ. ಸುಮಾರು 60 ವರ್ಷದ ನಂತರ ಮತ್ತೆ ವಿಶ್ವದಲ್ಲಿ ಕ್ರಿಕೆಟ್ ಆಟ ತನ್ನ ಎಲ್ಲಾ ಚಟುವಟಿಕೆಯನ್ನು ನಿಲ್ಲಿಸಿದೆ.
ಕೊರೊನ ವೈರಸ್ ಹೊಡೆತಕ್ಕೆ ವಿಶ್ವದಲ್ಲಿ 5 ಸಾವಿರಕ್ಕೂ ಹೆಚ್ಚು ಜನರನ್ನು ಸಾವನ್ನಪ್ಪಿದ್ದಾರೆ. ಇದರಿಂದ ಅನೇಕ ಆರ್ಥಿಕತೆಗೆ ಮತ್ತು ಜಾಗತಿಕ ಕ್ರೀಡಾಕೂಟಗಳಿಗೆ ಹಾನಿಯಾಗಿದೆ. ಕೊರೊನಾ ವೈರಸ್‍ನಿಂದ ಫಾರ್ಮುಲಾ ಒನ್ ರೇಸ್, ಫುಟ್ಬಾಲ್, ರಗ್ಬಿಯಂತಹ ಜನಪ್ರಿಯ ಕ್ರೀಡೆಗಳು ನಿಂತು ಹೋಗಿವೆ. ಇದರ ಜೊತೆಗೆ ಕೊರೊನಾ ಕರಿನೆರಳು ಕ್ರಿಕೆಟ್ ಮೇಲೆ ಬಿದ್ದಿದ್ದು, ಕ್ರಿಕೆಟಿನ ಚುಟುವಟಿಕೆ ಸಂಪೂರ್ಣವಾಗಿ ಬಂದ್ ಆಗಿದೆ.
Advertisement
Advertisement
ಕೊರೊನಾ ವೈರಸ್ ಎಲ್ಲಡೇ ಮಾರಕವಾಗಿ ಹಬ್ಬಿದ ಪರಿಣಾಮ ಮೊದಲಿಗೆ ಭಾರತ ವಿರುದ್ಧದ ದಕ್ಷಿಣ ಆಫ್ರಿಕಾ ಏಕದಿನ ಪ್ರವಾಸ ರದ್ದಾಗಿತ್ತು. ನಂತರ ಪ್ರೇಕ್ಷಕರಿಲ್ಲದೆ ಆಡಿದ ಒಂದು ಏಕದಿನ ಪಂದ್ಯವನ್ನು ಹೊರತುಪಡಿಸಿದರೆ ನ್ಯೂಜಿಲೆಂಡ್‍ನ ಆಸ್ಟ್ರೇಲಿಯಾ ಪ್ರವಾಸ ಕೂಡ ಅರ್ಧಕ್ಕೆ ನಿಂತು ಹೋಗಿದೆ. ಇಂಗ್ಲೆಂಡ್ ಮತ್ತು ಶ್ರೀಲಂಕಾ ನಡುವಿನ ಪ್ರವಾಸವನ್ನು ಮುಂದೂಡಲಾಗಿದೆ.
Advertisement
ಕೊರೊನಾಗೆ ತತ್ತರಿಸಿದ ಐಪಿಎಲ್
ಕೊರೊನಾ ವೈರಸ್‍ನಿಂದಾಗಿ ಇದೇ ತಿಂಗಳು ಮಾರ್ಚ್ 29 ರಂದು ನಡೆಯಬೇಕಿದ್ದ ಪ್ರಪಂಚದ ಶ್ರೀಮಂತ ಕ್ರಿಕೆಟ್ ಟೂರ್ನಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2020) ಅನ್ನು ಮುಂದೂಡಲಾಗಿದೆ. ಕೊರೊನಾ ಅರ್ಭಟ ಕಮ್ಮಿಯಾದರೆ ಐಪಿಎಲ್ ಅನ್ನು ಏಪ್ರಿಲ್ ತಿಂಗಳಲ್ಲಿ ಆರಂಭ ಮಾಡುವುದಾಗಿ ಬಿಸಿಸಿಐ ಹೇಳಿತ್ತು. ಆದರೆ ಸೋಂಕು ಕಮ್ಮಿಯಾಗುವ ಲಕ್ಷಣ ಕಂಡುಬಾರದ ಹಿನ್ನೆಲೆ ಜೂನ್ ತಿಂಗಳಲ್ಲಿ ಆಡಿಸಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ. ಈ ಸೋಂಕಿನಿಂದ ಪಾಕಿಸ್ತಾನ ಸೂಪರ್ ಲೀಗ್ ಕೂಡ ಅರ್ಧಕ್ಕೆ ನಿಂತು ಹೋಗಿದೆ.
Advertisement
ಕೊರೊನಾ ವೈರಸ್ ಕ್ರಿಕೆಟ್ ಅಭಿಮಾನಿಗಳ ಮನರಂಜನೆಯನ್ನು ಕಿತ್ತುಕೊಂಡಿದೆ. ಅದರೆ ಈ ರೀತಿ ಕ್ರಿಕೆಟ್ ವಿಶ್ವದಲ್ಲಿ ಸ್ತಬ್ಧವಾಗುತ್ತಿರುವುದು ಇದೇ ಮೊದಲೇನಲ್ಲ. ಇದಕ್ಕೂ ಹಿಂದೆ ಎರಡು ಬಾರಿ ಕ್ರಿಕೆಟ್ ನಿಂತು ಹೋಗಿತ್ತು. 1877ರಲ್ಲಿ ಆರಂಭವಾದ ಕ್ರಿಕೆಟ್ ಇಲ್ಲಿವರೆಗೂ ಎರಡು ಬಾರಿ ತನ್ನ ಚಟುವಟಿಕೆನ್ನು ಸಂಪೂರ್ಣವಾಗಿ ನಿಲ್ಲಿಸಿದೆ. ಆದರೆ ಅಂದು ಯಾವುದೇ ಸಂಕ್ರಾಮಿಕ ರೋಗದಿಂದ ಕ್ರಿಕೆಟ್ ನಿಂತಿರಲಿಲ್ಲ. ಬದಲಿಗೆ ವಿಶ್ವದಲ್ಲಿ ನಡೆದು ಮಹಾಯುದ್ಧದ ಸಲುವಾಗಿ ನಿಂತಿತ್ತು. ಆದರೆ ಮಹಾಯುದ್ಧದ ಸಮಯದಲ್ಲೂ ಇಂಡಿಯಾದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ನಿಂತಿರಲಿಲ್ಲ.
ಮೊದಲ ಮಹಾಯುದ್ಧ (1914 ಜು.28ರಿಂದ 1918 ನ.11ರವರೆಗೆ)
1914 ರಲ್ಲಿ ಮೊದಲ ಮಹಾಯುದ್ಧ ಆರಂಭವಾದಾಗ ಇಂಗ್ಲೆಂಡಿನ ಕೆಲ ಪ್ರಥಮ ದರ್ಜೆ ಕ್ರಿಕೆಟಿಗರು ಸೈನ್ಯ ಸೇರಿ ದೇಶಸೇವೆ ಮಾಡಲು ಹೊರಟಿದ್ದರು. 1914 ಸೆಪ್ಟೆಂಬರ್ 2ರಿಂದ ಇಂಗ್ಲೆಂಡ್‍ನಲ್ಲಿ ಕ್ರಿಕೆಟ್ ಅಮಾನತುಗೊಳಿಸಲಾಗಿತ್ತು. 210ಕ್ಕೂ ಹೆಚ್ಚು ಪ್ರಥಮ ದರ್ಜೆ ಕ್ರಿಕೆಟಿಗರು ಬ್ರಿಟಿಷ್ ಸೈನ್ಯಕ್ಕೆ ಸೇರಿದ್ದರು. ಇಂಗ್ಲೆಂಡ್ ನಂತರ ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ದೇಶಗಳು ಪ್ರಥಮ ದರ್ಜೆ ಕ್ರಿಕೆಟ್ ಅನ್ನು ಅಮಾನತುಗೊಳಿಸಿದ್ದವು.
ಯಾವ ಯಾವ ದೇಶಗಳು ಎಷ್ಟು ದಿನಗಳ ಕಾಲ ಕ್ರಿಕೆಟ್ ಅನ್ನು ಅಮಾನತ್ತು ಮಾಡಿದ್ದವು ಎಂದು ನೋಡುವುದಾದರೆ ವೆಸ್ಟ್ ಇಂಡೀಸ್ 1913 ಮಾರ್ಚ್ 14ರಿಂದ 1920 ಫೆಬ್ರವರಿ 5ರ ವರೆಗೆ, ಇಂಗ್ಲೆಂಡ್ 1914 ಸೆಪ್ಟೆಂಬರ್ 2ರಿಂದ 1919 ಮೇ 12ರವರೆಗೆ, ಆಸ್ಟ್ರೇಲಿಯಾ 1915 ಫೆಬ್ರವರಿ 19ರಿಂದ 1918 ಡಿಸೆಂಬರ್ 26ರವರೆಗೆ, ನ್ಯೂಜಿಲೆಂಡ್ 1915 ಏಪ್ರಿಲ್ 2ರಿಂದ 1917 ಡಿಸೆಂಬರ್ 25ರವರೆಗೆ ಮತ್ತು ದಕ್ಷಿಣ ಆಫ್ರಿಕಾ 1914 ಏಪ್ರಿಲ್ 11ರಿಂದ 1919 ಅಕ್ಟೋಬರ್ 18ರವರೆಗೆ ಕ್ರಿಕೆಟ್ ಚಟುವಟಿಕೆಯನ್ನು ನಿಲ್ಲಿಸಿತ್ತು.
ಎರಡನೆಯ ಮಹಾಯುದ್ಧ (1939 ಸೆ.1 ರಿಂದ, 1945 ಸೆ.2ರವರೆಗೆ)
ಒಂದನೇ ಮಹಾಯುದ್ಧದ ಬಳಿಕ ಮತ್ತೆ ಆರಂಭವಾಗಿದ್ದ ಕ್ರಿಕೆಟ್ ಚಟುವಟಿಕೆ ಎರಡನೇ ಮಹಾಯುದ್ಧ ಆರಂಭವಾದಾಗ ಎರಡನೇ ಬಾರಿಗೆ ಮತ್ತೆ ಸ್ತಬ್ಧವಾಗಿತ್ತು. ಯುದ್ಧ ಆರಂಭವಾದಾಗ ತಕ್ಷಣ ಇಂಗ್ಲೆಂಡ್ ತನ್ನೆಲ್ಲ ಕ್ರಿಕೆಟ್ ಚಟುವಟಿಕೆಯನ್ನು ನಿಲ್ಲಿಸಿತ್ತು. ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್ ಮತ್ತು ನ್ಯೂಜಿಲೆಂಡ್‍ನಲ್ಲಿ ಹಲವಾರು ಪ್ರಥಮ ದರ್ಜೆ ಪಂದ್ಯಗಳು ನಡೆಯುತ್ತಲೇ ಇದ್ದವು. ಆದರೆ ಈ ಪಂದ್ಯಗಳು ಹೆಚ್ಚಾಗಿ ಯುದ್ಧದಲ್ಲಿ ಆದ ನಷ್ಟಕ್ಕೆ ಹಣವನ್ನು ಸಂಗ್ರಹಿಸುವ ಗುರಿಯನ್ನು ಹೊಂದಿದ್ದವು. ಈ ಬಾರಿಯೂ ಕೂದ ಭಾರತದಲ್ಲಿ ರಣಜಿ ಟ್ರೋಫಿ ಯಾವುದೇ ಅಡೆತಡೆಗಳಿಲ್ಲದೆ ಮುಂದುವರಿದಿತ್ತು.
ಎರಡನೇ ಮಹಾಯುದ್ಧದ ಸಮಯದಲ್ಲಿ, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ದೇಶಗಳು ರಾಷ್ಟ್ರೀಯ ಪಂದ್ಯಾವಳಿಗಳನ್ನು ಮಾತ್ರ ರದ್ದು ಮಾಡಿದ್ದವು. ಇನ್ನೂ ಇಂಗ್ಲೆಂಡ್ 1939 ಸೆಪ್ಟೆಂಬರ್ 2ರಿಂದ 1945 ಮೇ 18ರವರೆಗೆ ಮತ್ತು ಆಸ್ಟ್ರೇಲಿಯಾ 1941 ಡಿಸೆಂಬರ್ 2 ರಿಂದ 1945 ನವೆಂಬರ್ 22ರವರೆಗೆ ತನ್ನ ಎಲ್ಲಾ ಕ್ರಿಕೆಟ್ ಪಂದ್ಯಗಳನ್ನು ರದ್ದು ಮಾಡಿತ್ತು.
ಎರಡನೇ ಮಹಾಯುದ್ಧ ಮುಗಿದ ಬಳಿಕ ಮತ್ತೆ ವಿಶ್ವದಲ್ಲಿ ಯಾವುದೇ ಮಹಾಯುದ್ಧಗಳು ನಡೆದಿರಲಿಲ್ಲ. ಬಳಿಕ ಬಹಳ ಜನಪ್ರಿಯವಾದ ಕ್ರಿಕೆಟ್ ಆಟ ಕೂಡ ಎಂದಿಗೂ ನಿಂತಿರಲಿಲ್ಲ. ಆದರೆ 60 ವರ್ಷದ ಬಳಿಕ ಮತ್ತೆ ಯಾವುದೇ ಮಹಾಯುದ್ಧಗಳು ಸಂಭವಿಸದಿದ್ದರೂ ಮಹಾಮಾರಿ ಕೊರೊನಾಗೆ ಭಯಪಟ್ಟು ಮೂರನೇ ಬಾರಿಗೆ ಕ್ರಿಕೆಟ್ ಚಟುವಟಿಕೆಗಳು ಸಂಪೂರ್ಣವಾಗಿ ನಿಂತು ಹೋಗಿವೆ.