ನವದೆಹಲಿ: ದೆಹಲಿ ಅತಿಯಾದ ಬಿಸಿಲು ಮತ್ತು ದಟ್ಟ ವಾಯು ಮಾಲಿನ್ಯಕ್ಕೆ ಕುಖ್ಯಾತಿ ಪಡೆದುಕೊಂಡಿತ್ತು. ಆದರೆ ಈ ಬಾರಿ ರಣ ಬಿಸಿಲನ್ನು ಮೀರಿಸುವ ರೀತಿಯಲ್ಲಿ ಮೈ ಕೊರತೆಯುವ ಚಳಿ ಆರಂಭವಾಗಿದೆ. ಪ್ರತಿವರ್ಷ ಬಿಸಿಲಿನ ತಾಪ ತಾಳಲಾರದೆ ದೆಹಲಿಯ ಜನರು ಶಿಮ್ಲಾ, ಮನಾಲಿ, ಮಸ್ಸೂರಿಯಂತಹ ಪ್ರಖ್ಯಾತ ಗಿರಿಧಾಮಗಳಿಗೆ ಹೋಗಿ ರಿಲ್ಯಾಕ್ಸ್ ಮಾಡಿ ಬರುತ್ತಿದ್ದರು. ಆದರೆ ಈ ಬಾರಿ ದೆಹಲಿಯ ಕೆಲವು ಪ್ರದೇಶಗಳಲ್ಲಿ ಗಿರಿಧಾಮಗಳನ್ನೇ ಮೀರಿಸುವ ಕನಿಷ್ಠ ತಾಪಮಾನ ದಾಖಲಾಗಿದೆ.
119 ವರ್ಷಗಳ ಬಳಿಕ ದೆಹಲಿ ಮತ್ತು ದೆಹಲಿಯ ಸುತ್ತಲಿನ ಪ್ರದೇಶದ ಕಠಿಣ ಡಿಸೆಂಬರ್ ಅನ್ನು ಎದುರಿಸುತ್ತಿದೆ. ದೆಹಲಿಯಲ್ಲಿ ಡಿಸೆಂಬರ್ 14ರ ಬಳಿಕ ದಿನದಿಂದ ದಿನಕ್ಕೆ ಕನಿಷ್ಠ ತಾಪಮಾನ ದಾಖಲಾಗುತ್ತಿದ್ದು, ತೀವ್ರ ಚಳಿಗೆ ಜನರು ಕಂಗೆಟ್ಟು ಹೋಗಿದ್ದಾರೆ. ಈಗ ಚಳಿಯಿಂದ ರಕ್ಷಿಸಿಕೊಳ್ಳಲು ದೆಹಲಿಯಿಂದ ಹೊರಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
Advertisement
ಕಳೆದ ಎರಡು ದಿನಗಳಿಂದ ಪ್ರಖ್ಯಾತ ಗಿರಿಧಾಮ ಉತ್ತರಾಖಂಡದ ಮುಸ್ಸೂರಿಯಲ್ಲಿ, ಹಗಲು ಮತ್ತು ರಾತ್ರಿ ಸಮಯದಲ್ಲಿ ಗರಿಷ್ಠ ತಾಪಮಾನವು 14 ಡಿಗ್ರಿ ಸೆಲ್ಸಿಯಸ್‍ಗಿಂತ ಹೆಚ್ಚಾಗಿದೆ. ಈ ಎರಡೂ ದಿನಗಳಲ್ಲಿ, ರಾಜಧಾನಿ ದೆಹಲಿಯಲ್ಲಿ ಮಸ್ಸೂರಿಗಿಂತ ಕಡಿಮೆ ಉಷ್ಣಾಂಶ ದಾಖಲಾಗಿದೆ. ಭಾರತೀಯ ಹವಾಮಾನ ಕೇಂದ್ರಗಳು ಕಡಿಮೆ ತಾಪಮಾನದ ಶಿಖರಗಳನ್ನು ನೋಂದಾಯಿಸಿದ್ದು ಶನಿವಾರ ಮತ್ತು ಭಾನುವಾರ ದೆಹಲಿಯ ಬಹುತೇಕ ಎಲ್ಲಾ ತಾಪಮಾನವು 14 ಡಿಗ್ರಿ ಸೆಲ್ಸಿಯಸ್‍ಗಿಂತ ಕಡಿಮೆಯಾಗಿದೆ. ಇದನ್ನು ಓದಿ: ದೆಹಲಿಯಲ್ಲಿ ವಿಪರೀತ ಚಳಿ – ಪ್ರಯಾಣಿಕರ ಮನಗೆದ್ದಿತು ಆಟೋ ಚಾಲಕನ ಸಿಂಪಲ್ ಐಡಿಯಾ
Advertisement
ಭಾನುವಾರ ಹಗಲು ದೆಹಲಿಯ ಜಾಫರ್ಪುರ್ ನಲ್ಲಿ 11.6 ಡಿಗ್ರಿ ಸೆಲ್ಸಿಯಸ್, ಮುಂಗೇಶ್ಪುರ 11.9 ಡಿಗ್ರಿ ಸೆಲ್ಸಿಯಸ್ , ಪಾಲಂ 13.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಶನಿವಾರ ರಾತ್ರಿ 2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಭಾನುವಾರ ಕನಿಷ್ಠ 2.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಶಿಮ್ಲಾ ಮತ್ತು ಮಸ್ಸೂರಿ ಗಿರಿಧಾಮಗಳಿಗೆ ಹೋಲಿಸಿಕೊಂಡರೆ ದೆಹಲಿ ಅತ್ಯಂತ ತಂಪಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
Advertisement
ಕಾರಣ ಏನು?
ದೆಹಲಿಯಲ್ಲಿ ತೀವ್ರ ಚಳಿಗೆ ಹಲವು ಕಾರಣಗಳಿವೆ ಪ್ರಮುಖವಾಗಿ ಕಳೆದ ಹದಿನೈದು ದಿನಗಳಿಂದ ಉತ್ತರದ ಬಯಲು ಪ್ರದೇಶಗಳು ಬೆಳಗ್ಗೆ ಹೊತ್ತು ಮಂಜಿನ ಹೊದಿಕೆ ಹೊದ್ದಿವೆ. ಉತ್ತರ ಭಾರತದ ಬಹುತೇಕ ರಾಜ್ಯಗಳು ಮತ್ತು ಪೂರ್ವ ಪಾಕಿಸ್ತಾನ ತೀವ್ರ ಮಂಜಿನಿಂದ ಕೂಡಿದ್ದು ಮೋಡದ ಹೊದಿಕೆ ಹೊದ್ದಂತೆ ಭಾಸವಾಗಿದೆ. ಹೀಗೆ ನಿರ್ಮಾಣವಾಗಿರುವ ದಟ್ಟ ಮಂಜು ಸೂರ್ಯನ ಬೆಳಕು ಭೂಮಿಗೆ ತಾಗದಂತೆ ಮಾಡಿದೆ. ಈ ಮಂಜು ಅಥವಾ ಮೋಡದ ಹೊದಿಕೆ ಸಾಮಾನ್ಯವಾಗಿ ನೆಲದಿಂದ ಕೆಲವೇ ನೂರು ಮೀಟರ್ ಎತ್ತರದಲ್ಲಿದ್ದು ತೀವ್ರ ಚಳಿಗೆ ಕಾರಣ ಎನ್ನಲಾಗಿದೆ. 1,600-2,000 ಮೀಟರ್ ಎತ್ತರದಲ್ಲಿರುವ ಗಿರಿಧಾಮಗಳಲ್ಲಿ ಈ ರೀತಿ ಮೋಡಗಳು ಆವರಿಸುವುದು ತುಂಬಾ ಕಡಿಮೆ. ಇದಲ್ಲದೆ ಕಳೆದ ಕೆಲವು ದಿನಗಳಿಂದ ಗಿರಿಧಾಮಗಳಲ್ಲಿ ಮಳೆಯಾಗಿಲ್ಲ. ಇದರ ಅರ್ಥ ಶಿಮ್ಲಾ ಅಥವಾ ಮಸ್ಸೂರಿಯಲ್ಲಿ ಬೆಳಿಗ್ಗೆ ಮಂಜು ಇದ್ದರೂ, ಸೂರ್ಯನ ಬೆಳಕು ಭೂಮಿಯನ್ನು ತಲುಪುತ್ತಿದೆ. ಹೀಗಾಗಿ ಶಿಮ್ಲಾ ಮತ್ತು ಮಸ್ಸೂರಿ ತೀವ್ರ ಚಳಿ ಇಲ್ಲ ಎಂದು ಐಎಮ್‍ಡಿಯ ಪ್ರಾದೇಶಿಕ ಹವಾಮಾನ ಮುನ್ಸೂಚನೆ ಕೇಂದ್ರದ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಹೇಳಿದ್ದಾರೆ. ವಾರಾಂತ್ಯದಲ್ಲಿ ಶಿಮ್ಲಾ ಮತ್ತು ಮಸ್ಸೂರಿ ಎರಡರಲ್ಲೂ ದಿನದ ತಾಪಮಾನವು ಸಾಮಾನ್ಯಕ್ಕಿಂತ ಮೂರರಿಂದ ನಾಲ್ಕು ಡಿಗ್ರಿಗಳಷ್ಟಿದೆ. ಇದನ್ನು ಓದಿ: ದೆಹಲಿಯಲ್ಲಿ ದಟ್ಟ ಮಂಜು – ಹೆದ್ದಾರಿ ಕಾಣದೆ ಕಾಲುವೆಗೆ ಬಿತ್ತು ಕಾರು
ಉತ್ತರ ಭಾರತದ ಪ್ರದೇಶಗಳಲ್ಲಿ ಸದ್ಯ ಪೂರ್ವದ ಶೀತಗಾಳಿ ಬೀಸುತ್ತಿದ್ದು ದೆಹಲಿ ಸೇರಿ ಹಲವಡೆ ದಟ್ಟ ಮಂಜು ಕವಿದುಕೊಳ್ಳಲು ಮತ್ತೊಂದು ಕಾರಣ ಎನ್ನಲಾಗಿದೆ. ಇದೇ ವೇಳೆ ಹಿಮಾಲಯ ಭಾಗದಲ್ಲಿ ನಿರಂತರ ಹಿಮಪಾತ ಆಗುತ್ತಿದ್ದು, ಈಶಾನ್ಯ ಮಾರುತಗಳ ಉತ್ತರದ ಕಡೆ ಬೀಸುತ್ತಿದೆ. ಈ ಎರಡರ ಪರಿಣಾಮದಿಂದ ದೆಹಲಿಯಲ್ಲಿ ದಟ್ಟ ಮಂಜು ಮತ್ತು ತೀವ್ರ ಕೊರತೆಯುವ ಚಳಿಗೆ ಕಾರಣ ಎಂದು ಹವಾಮಾನ ಇಲಾಖೆ ಹೇಳಿದೆ. ಸೋಮವಾರ ಬಳಿಕ ಈ ಮಾರುತಗಳು ದಿಕ್ಕು ಬದಲಿಸುವ ಸಾಧ್ಯ ಇದ್ದು ದೆಹಲಿಯಲ್ಲಿ ತಾಪಮಾನ ಗರಿಷ್ಠಕ್ಕೆ ಏರುವ ಸಾಧ್ಯತೆ ಇದೆ ಎನ್ನಲಾಗಿದೆ.