ನವದೆಹಲಿ: ಅತೃಪ್ತ ಶಾಸಕರ ರಾಜೀನಾಮೆ ಹಿಂದೆ ಬಿಜೆಪಿ ಇಲ್ಲ. ಬಿಜೆಪಿ ಯಾವುದೇ ಆಪರೇಷನ್ ಮಾಡಿಲ್ಲ ಮತ್ತು ಅತೃಪ್ತ ಶಾಸಕರಿಗೆ ಬಿಜೆಪಿ ಆಹ್ವಾನ ನೀಡಿಲ್ಲ ಎಂದು ಯಡಿಯೂರಪ್ಪ ಅವರ ಪುತ್ರ, ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.
ಇಂದು ದೆಹಲಿಯಲ್ಲಿ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ಅತೃಪ್ತ ಶಾಸಕರ ರಾಜೀನಾಮೆಗೆ ಹಲವಾರು ಕಾರಣಗಳಿವೆ. ರಾಜೀನಾಮೆ ಕೂಡಾ ಇನ್ನು ಅಂಗೀಕಾರ ಆಗಿಲ್ಲ. ಅತೃಪ್ತರು ಬಿಜೆಪಿ ಸೇರ್ಪಡೆ ಬಗ್ಗೆ ಪಕ್ಷ ತೀರ್ಮಾನ ಮಾಡಲಿದೆ. ತಪ್ಪುಗಳನ್ನು ಮುಚ್ಚಿಕೊಳ್ಳಲು ಮೈತ್ರಿ ನಾಯಕರು ಬಿಜೆಪಿ ಮೇಲೆ ಆಪರೇಷನ್ ಕಮಲದ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದರು.
ಯಾವುದೇ ಅತೃಪ್ತರು ನಮ್ಮ ಜೊತೆ ಸಂಪರ್ಕದಲ್ಲಿ ಇಲ್ಲ. ಅತೃಪ್ತ ಶಾಸಕರು ಯಾರ ಪರ ಇದ್ದೀವಿ ಎಂದು ಹೇಳಿಲ್ಲ. ಅವರು ಕೇವಲ ಮೈತ್ರಿ ವಿರುದ್ಧ ಎಂದು ಹೇಳಿದ್ದಾರೆ. ನಮ್ಮ 105 ಶಾಸಕರು ನಮ್ಮ ಜೊತೆ ಇದ್ದಾರೆ. ಬಿಜೆಪಿ ಯಾವ ಶಾಸಕರನ್ನು ಟಚ್ ಮಾಡಲು ಸಾಧ್ಯವಿಲ್ಲ ಮೈತ್ರಿ ನಾಯಕರು ನಮ್ಮ ಶಾಸಕರನ್ನು ಸೆಳೆಯಲು ಪ್ರಯತ್ನಿಸಿ ವಿಫಲರಾಗಿದ್ದಾರೆ ಎಂದು ತಿಳಿಸಿದರು.
ಮುಂದೆ ಕ್ಯಾಬಿನೆಟ್ ವಿಚಾರದಲ್ಲಿ ಎಚ್ಚರಿಕೆ ಹೆಜ್ಜೆ ಇಡುತ್ತೇವೆ. ಬಿಜೆಪಿ ರಾಷ್ಟ್ರೀಯ ಪಕ್ಷದ ಆದ ಹಿನ್ನೆಲೆ ಮೈತ್ರಿ ಸರ್ಕಾರದ ರೀತಿಯಲ್ಲಿ ಅಸಮಾಧಾನ ಕಂಡು ಬರಲ್ಲ ಪಕ್ಷದ ಚೌಕಟ್ಟಿನಲ್ಲಿ ಎಲ್ಲರೂ ಇರಲಿದ್ದಾರೆ ಎಂದು ಸ್ಪಷ್ಟಪಡಿಸಿದರು.