Connect with us

Corona

ಕೆಲ ಪ್ರದೇಶಗಳಲ್ಲಿ ಸಮುದಾಯಕ್ಕೆ ಕೊರೊನಾ ಹಬ್ಬುತ್ತಿದೆ: ಏಮ್ಸ್ ನಿರ್ದೇಶಕ

Published

on

ನವದೆಹಲಿ: ಭಾರತದಲ್ಲಿ ಕೊರೊನಾ ವೈರಸ್ ಏಕಾಏಕಿ ದೇಶದ ಕೆಲವು ಭಾಗಗಳಲ್ಲಿ ಸಮುದಾಯಕ್ಕೆ ಹಬ್ಬಿದೆ ಎಂದು ನವದೆಹಲಿಯ ಏಮ್ಸ್ ನಿರ್ದೇಶಕ ಡಾ.ರಂದೀಪ್ ಗುಲೇರಿಯಾ ಹೇಳಿದ್ದಾರೆ.

ಮಾಧ್ಯಮ ಸಂದರ್ಶನವೊಂದಲ್ಲಿ ಮಾತನಾಡಿದ ಅವರು, ಕೆಲವು ಪ್ರದೇಶಗಳಲ್ಲಿ ಸಮುದಾಯ ಪ್ರಸರಣ ಕಂಡುಬಂದರೂ ಭಾರತ ಇನ್ನೂ 2ನೇ ಹಂತ ಮತ್ತು 3ನೇ ಹಂತದ ಮಧ್ಯದಲ್ಲಿದೆ. ಕೆಲವು ಸ್ಥಳಗಳಲ್ಲಿ ಸೋಂಕಿತರ ಸಂಖ್ಯೆ ತೀವ್ರವಾಗಿ ಏರಿಕೆ ಕಂಡಿವೆ ಮತ್ತು ಮುಂಬೈನಂತಹ ಕೆಲವು ಪ್ರದೇಶಗಳಲ್ಲಿ ಸ್ಥಳೀಯ ಸಮುದಾಯ ಹರಡುವಿಕೆ ಕೂಡ ಗಮನಕ್ಕೆ ಬಂದಿದೆ. ಭಾರತದ ಹೆಚ್ಚಿನ ಭಾಗಗಳಲ್ಲಿ ಪ್ರಸ್ತುತ ಕೊರೊನಾ ವೈರಸ್ 2ನೇ ಹಂತದಲ್ಲಿದೆ ಎಂದು ಮಾಹಿತಿ ನೀಡಿದರು.

ಡಾ.ರಣದೀಪ್ ಗುಲೇರಿಯಾ ಅವರು ದೇಶದ ಕೆಲವು ಹಾಟ್‍ಸ್ಪಾಟ್‍ಗಳು ಸ್ಥಳೀಯ ಸಮುದಾಯ ಹರಡುವಿಕೆಯನ್ನು ಹೊಂದಿವೆ. ಇದನ್ನು ಆರಂಭಿಕ ಹಂತದಲ್ಲಿ ನಿಲ್ಲಿಸಿದರೆ ಅಷ್ಟೊಂದು ಕೆಟ್ಟ ಪರಿಣಾಮ ಬೀರುವುದಿಲ್ಲ. ಸಮುದಾಯ ಹರಡುವಿಕೆಯು ಕೆಲವು ಪ್ರದೇಶಗಳಲ್ಲಿ ಪ್ರಾರಂಭವಾಗಿದೆ. ಆದ್ದರಿಂದ ನಾವು ಹೆಚ್ಚು ಜಾಗರೂಕರಾಗಿರುವುದು ಅವಶ್ಯಕ ಎಂದು ತಿಳಿಸಿದರು.

ದೆಹಲಿಯಲ್ಲಿ ಕಳೆದ ತಿಂಗಳು ನಡೆದ ತಬ್ಲಿಘಿ ಜಮಾತ್ ಕಾರ್ಯಕ್ರಮದಿಂದ ಕೊರೊನಾ ಸೋಂಕಿತರ ಹೆಚ್ಚಳಕ್ಕೆ ಕಾರಣವಾಗಿದೆ. ಜಮಾತ್ ಸಭೆಗೆ ಹಾಜರಾದ ಅಥವಾ ಭಾಗವಹಿಸಿದ್ದವರೊಂದಿಗೆ ಸಂಪರ್ಕ ಹೊಂದಿದ ಎಲ್ಲರನ್ನೂ ಪತ್ತೆಹಚ್ಚುವುದು ಬಹಳ ಮುಖ್ಯ ಎಂದು ಹೇಳಿದರು.

ಇದೇ ವೇಳೆ ಡಾ.ರಂದೀಪ್ ಗುಲೇರಿಯಾ ಅವರು, ಈ ಸಮಯದಲ್ಲಿ ವೈದ್ಯರನ್ನು ಬೆಂಬಲಿಸುವಂತೆ ಕೇಳಿಕೊಂಡರು. ಹೆಮ್ಮಾರಿ ಕೊರೊನಾ ಸೋಂಕಿನ ವಿರುದ್ಧ ಹೋರಾಡುತ್ತಿರುವವರಿಗೆ ಚಿಕಿತ್ಸೆ ನೀಡುವುದು ಭಾರೀ ಅಪಾಯಕಾರಿ. ಹೀಗಾಗಿ ವೈದ್ಯರು ಸಹ ಭಯದಿಂದ ಬದುಕುತ್ತಿದ್ದಾರೆ. ಅವರನ್ನು ಬೆಂಬಲಿಸಿ, ಪ್ರೋತ್ಸಾಹಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

21 ದಿನಗಳ ಲಾಕ್‍ಡೌನ್ ಅನ್ನು ವಿಸ್ತರಿಸಲಾಗುತ್ತದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಡಾ.ಗುಲೇರಿಯಾ ಅವರು, ಏಪ್ರಿಲ್ 10ರ ನಂತರ ಪರಿಸ್ಥಿತಿ ಸ್ಪಷ್ಟವಾಗಲಿದೆ. ಆಗ ಮಾತ್ರ ಲಾಕ್‍ಡೌನ್ ವಿಸ್ತರಿಸಬೇಕೋ ಅಥವಾ ಬೇಡವೋ ಎಂದು ಹೇಳಲು ನಮಗೆ ಸಾಧ್ಯವಾಗುತ್ತದೆ. ಪರಿಸ್ಥಿತಿ ಸಾಮಾನ್ಯವಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ ಎಂದು ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

www.publictv.in