ನವದೆಹಲಿ: ದೇಶದ್ಯಾಂತ ವಿವಾದಕ್ಕೆ ಕಾರಣವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ ವಿಚಾರದಲ್ಲಿ ಆಮ್ ಆದ್ಮಿ ಪಕ್ಷ ಅಂತರ ಕಾಯ್ದುಕೊಳ್ಳುತ್ತಿದೆ. ವಿಪಕ್ಷಗಳ ಸಭೆಯಿಂದ ದೂರ ಉಳಿದಿದ್ದ ಆಮ್ ಅದ್ಮಿ ಚುನಾವಣಾ ಪ್ರಚಾರಗಳಲ್ಲೂ ಈ ಬಗ್ಗೆ ಸೊಲ್ಲೇತ್ತುತ್ತಿಲ್ಲ.
ದೆಹಲಿ ವಿಧಾನಸಭೆ ಚುನಾವಣೆ ಹಿನ್ನೆಲೆ ಆಪ್ ಎಚ್ಚರಿಕೆ ಹೆಜ್ಜೆ ಇಡಲು ಆರಂಭಿಸಿದೆ. ಸಿಎಎ ಮತ್ತು ಎನ್.ಆರ್.ಸಿ ವಿಚಾರದಲ್ಲಿ ತಟಸ್ಥವಾಗುವ ಮೂಲಕ ತನ್ನ ಮತಗಳನ್ನು ಕ್ರೋಡಿಕರಿಸುವ ಕೆಲಸಕ್ಕೆ ಮುಂದಾಗಿದೆ. ಬಿಜೆಪಿ ಸಿಎಎ ಎನ್.ಆರ್.ಸಿಯನ್ನೆ ಬಂಡವಾಳ ಮಾಡಿಕೊಂಡು ಮತ ಬೇಟೆಗೆ ಇಳಿದಿದೆ. ಇತ್ತ ಕಾಂಗ್ರೆಸ್ ಈ ಎರಡು ಅಂಶಗಳನ್ನು ತೀವ್ರವಾಗಿ ವಿರೋಧಿಸಿದೆ. ಆಪ್ ಮಾತ್ರ ತಟಸ್ಥ ನೀತಿ ಅನುಸರಿಸುವ ಮೂಲಕ ಎರಡು ಬದಿಯ ಮತಗಳನ್ನು ಸೆಳೆಯುವ ತಂತ್ರ ಮಾಡುತ್ತಿದೆ.
ಸಿಎಎ ಮತ್ತು ಎನ್.ಆರ್.ಸಿ ವಿರೋಧದಿಂದ ದೆಹಲಿಯಲ್ಲಿರುವ ಹೆಚ್ಚಿನ ಸಂಖ್ಯೆಯ ಜಾಟ್, ಗುಜ್ಜರ್, ಪಂಜಾಬಿ ಮತ್ತು ಪೂರ್ವಾಂಚಲ ಮತಗಳಲ್ಲಾಗುವ ಬದಲಾವಣೆಗಳನ್ನು ಊಹಿಸಲು ಕ್ಲಿಷ್ಟವಾಗಿದ್ದರಿಂದ ಆಪ್ ಪಕ್ಷವು ಸಿಎಎ ಮತ್ತು ಎನ್.ಆರ್.ಸಿ ಕುರಿತು ಪರ-ವಿರೋಧದ ನಿಲುವು ತಾಳದೆ ತಟಸ್ಥವಾಗಿದೆ. ಸಿಎಎ ತಿದ್ದುಪಡಿ ಕಾಯ್ದೆ ಜಾರಿ ಆದ ನಂತರ ನಡೆದ ಜಾರ್ಖಂಡ್ ಚುನಾವಣೆಯಲ್ಲಿ ಬಿಜೆಪಿ ಪರಾಭವಗೊಂಡರು ಮತಗಳಿಕೆಯಲ್ಲಿ ಕಳೆದ ಬಾರಿಗಿಂತ ಈ ಚುನಾವಣೆಯಲ್ಲಿ ಏರಿಕೆ ಕಂಡಿದೆ. ಇದೇ ಕಾರಣದಿಂದ ಆಪ್ ಈ ನಿಲುವು ತಾಳಿದೆ ಎನ್ನಲಾಗಿದೆ.
ಸಿಎಎ ಎನ್.ಆರ್.ಸಿ ತಟಸ್ಥ ನೀತಿಯಿಂದ ದೆಹಲಿಯಲ್ಲಿರುವ ಮುಸ್ಲಿಂ ಹಾಗೂ ಹಿಂದೂಳಿದ ವರ್ಗಗಳ ಮತಗಳನ್ನು ಸೆಳೆಯಬಹುದು. ಜೊತೆಗೆ ಆಪ್ ಸರ್ಕಾರವನ್ನು ಶ್ಲಾಘಿಸುವ ಮೇಲ್ವರ್ಗದ ವೋಟ್‍ಗಳು, ದೆಹಲಿ ಹೊರ ವಲಯದಲ್ಲಿರುವ ನಿರಾಶ್ರಿತರ ವೋಟ್‍ಗಳನ್ನು ಗಳಿಸಬಹುದು ಎಂಬುದು ಆಪ್ ಲೆಕ್ಕಾಚಾರ. ಸಿಎಎ ಅಥವಾ ಎನ್.ಆರ್.ಸಿ ವಿಚಾರದಲ್ಲಿ ಯಾವುದಾದರೂ ಒಂದು ನಿರ್ಧಾರಕ್ಕೆ ಬಂದಲ್ಲಿ ವೋಟ್ ಬ್ಯಾಂಕ್‍ಗೆ ಧಕ್ಕೆ ಆಗಬಹುದು ಎನ್ನುವ ಲೆಕ್ಕಾಚಾರದಲ್ಲಿ ಎಚ್ಚರಿಯ ಹೆಜ್ಜೆ ಇಡುತ್ತಿದೆ.