ಮನುಕುಲವನ್ನು ಇನ್ನಿಲ್ಲದಂತೆ ಕಾಡಿದ ಮಾರಕ ಕೊರೊನಾ ವೈರಸ್ (Corona Virus) ಮತ್ತೆ ವಕ್ಕರಿಸಿದೆ. ಲಕ್ಷಾಂತರ ಮಂದಿಯನ್ನು ಬಲಿಪಡೆದು ರಣಕೇಕೆ ಹಾಕಿದ್ದ ಕೋವಿಡ್-19 (Covid-19) ಹೊಸ ರೂಪಾಂತರದೊಂದಿಗೆ ಬಂದು ಆತಂಕ ಮೂಡಿಸಿದೆ. 2019ರಲ್ಲಿ ಕೊರೊನಾ ಮೊದಲ ಬಾರಿಗೆ ಕಾಣಿಸಿಕೊಂಡಾಗ ಇಡೀ ಜಗತ್ತು ಸ್ತಬ್ಧಗೊಂಡಿತ್ತು. ಒಬ್ಬರಿಂದ ಮತ್ತೊಬ್ಬರಿಗೆ ಬಹುಬೇಗ ಹರಡಿ ಕಾಡುವ ವೈರಸ್ ನಿಯಂತ್ರಣಕ್ಕೆ ಇನ್ನಿಲ್ಲದ ಕಸರತ್ತು ನಡೆಯಿತು. ಎಲ್ಲಾ ದೇಶಗಳು ಗಡಿ ಬಂದ್ ಮಾಡಿಕೊಂಡರೆ, ಜನರು ಮನೆಯೊಳಗಿದ್ದು ಬಾಗಿಲು ಹಾಕಿಕೊಳ್ಳುವಂತಾಗಿತ್ತು. ಅಪಾರ ಸಾವು-ನೋವು, ಆರ್ಥಿಕ ಬಿಕ್ಕಟ್ಟು ದೇಶಗಳನ್ನು ಕಾಡಿದವು. ಕೊನೆಗೆ ಮಾರಕ ವೈರಸ್ ನಿಯಂತ್ರಣಕ್ಕೆ ಲಸಿಕೆಗಳು ನೆರವಾದವು. ದುಸ್ವಪ್ನದಂತೆ ಕಾಡಿದ ಕೊರೊನಾ ಹೋಯ್ತಪ್ಪ ಎಂದು ನಿಟ್ಟುಸಿರು ಬಿಡುವಾಗಲೇ ಮತ್ತೊಂದು ರೂಪದಲ್ಲಿ ಎದುರಾಗಿ ಭೀತಿ ಹುಟ್ಟಿಸಿದೆ.
ಯಾವುದಿದು ಕೋವಿಡ್ ಹೊಸ ರೂಪಾಂತರಿ? ಇದರ ಲಕ್ಷಣಗಳೇನು? ಎಫೆಕ್ಟ್ ಏನು? ವಿದೇಶಗಳು ಮತ್ತು ಭಾರತದಲ್ಲಿ ಇದರ ಸ್ಥಿತಿ ಈಗ ಹೇಗಿದೆ? ನಿಯಂತ್ರಣ ಹೇಗೆ? ಮುಂಜಾಗ್ರತಾ ಕ್ರಮ ಏನು? ಇದನ್ನೂ ಓದಿ:
ಕೋವಿಡ್ ಹೊಸ ರೂಪಾಂತರಿ
NB.1.8.1 ಮತ್ತು LF.7 ಇವು ಕೋವಿಡ್‌ನ ಹೊಸ ರೂಪಾಂತರಿ.
ಏನಿವು ಉಪತಳಿ?
ವಿಶ್ವ ಆರೋಗ್ಯ ಸಂಸ್ಥೆಯ ವೈರಸ್ ವಿಕಸನದ ತಾಂತ್ರಿಕ ಸಲಹಾ ತಂಡ, ಎನ್‌ಬಿ.1.8.1 ಮತ್ತು ಎಲ್‌ಎಫ್.7 ಇವು ಓಮಿಕ್ರಾನ್ ಉಪತಳಿಗಳಾಗಿವೆ. ‘ನಿಗಾ ವಹಿಸಬೇಕಾದ ಉಪತಳಿ’ ಎಂದು ತಿಳಿಸಿದೆ. ಇದು ಜೆಎನ್.1ನ ಉಪತಳಿಯಾಗಿದೆ. ವೈರಸ್‌ನ ಗುಣಲಕ್ಷಣಗಳಲ್ಲಿ ಇದು ಗಮನಾರ್ಹ ಬದಲಾವಣೆ ಹೊಂದಿದೆ.
ಉಪತಳಿ ಅಪಾಯಕಾರಿಯೇ?
ಎನ್‌ಬಿ.1.8.1 ಮತ್ತು ಎಲ್‌ಎಫ್.7 ಅಪಾಯಕಾರಿಯಲ್ಲ. ಆದರೆ, ನಿಗಾ ವಹಿಸಬೇಕಾದ ಉಪತಳಿ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಸೋಂಕಿನ ತೀವ್ರತೆ ಏನು?
ಇವು ವೇಗವಾಗಿ ಹರಡುವ ಸೋಂಕಾಗಿವೆ.
ಸೋಂಕಿನ ಲಕ್ಷಣಗಳೇನು?
ಗಂಟಲು ನೋವು, ಕೆಮ್ಮು, ಮೂಗಿನಲ್ಲಿ ಸೋರಿಕೆ, ಸೌಮ್ಯ ಜ್ವರ, ವಾಕರಿಕೆ, ಹಸಿವು ಆಗದಿರುವುದು, ಜಠರ ಕರುಳಿನಲ್ಲಿ ಅಸ್ವಸ್ಥತೆ, ತಲೆನೋವು, ತಲೆತಿರುಗುವಿಕೆ, ತೀವ್ರ ಆಯಾಸ, ಸ್ನೇಯು ದೌರ್ಬಲ್ಯ, ನಿದ್ರೆಯಲ್ಲಿ ತೊಂದರೆ ಸೋಂಕಿನ ಲಕ್ಷಗಳಾಗಿವೆ.
ಜಠರ ಕರುಳಿನ ಸಮಸ್ಯೆ: ಸೋಂಕಿತರಲ್ಲಿ ವಾಕರಿಕೆ, ಹಸಿವಿನ ಸಮಸ್ಯೆ, ಜಠರ ಕರುಳಿನ ತೊಂದರೆ ಇರಲಿದೆ.
ನರ ಸಂಬಂಧಿತ ತೊಂದರೆ: ತಲೆನೋವು, ತಲೆತಿರುಗುವಿಕೆ ಮತ್ತು ಗಮನ ಕೇಂದ್ರೀಕರಿಸುವಲ್ಲಿ ತೊಂದರೆ ಕಾಣಿಸಿಕೊಳ್ಳಲಿದೆ.
ಈ ಸೋಂಕಿಗೆ ಒಳಗಾದವರು ಜ್ವರಕ್ಕೆ ಸಂಬಂಧಿಸಿದ ವಿಶಿಷ್ಟ ಬೆವರು ಅಥವಾ ಉಸಿರಾಟದ ಸಮಸ್ಯೆಯಿಂದ ಬಳಲುತ್ತಾರೆ. ಹೈಪರ್ಥರ್ಮಿಯಾ ಎಂದು ಕರೆಯಲ್ಪಡುವ ಈ ಸ್ಥಿತಿಯು ದೇಹದ ಥರ್ಮೋರ್ಗ್ಯುಲೇಷನ್ ಕಾರ್ಯವಿಧಾನಗಳಲ್ಲಿ ಸಮಸ್ಯೆ ಉಂಟು ಮಾಡುತ್ತದೆ. ಕೆಲವರಿಗೆ ತೀವ್ರ ಆಯಾಸ, ಸ್ನಾಯು ದೌರ್ಬಲ್ಯ ಕಂಡುಬರಲಿದೆ. ಇದು ದೈನಂದಿನ ಚಟುವಟಿಕೆಗಳಿಗೆ ತೊಂದರೆ ಉಂಟುಮಾಡಲಿದೆ.
ಮುನ್ನೆಚ್ಚರಿಕೆ ಕ್ರಮಗಳೇನು?
ಅಂತರರಾಷ್ಟ್ರೀಯ ಪ್ರಯಾಣ ಕೈಗೊಳ್ಳುವವರು NB.1.8.1 ಮತ್ತು ಎಲ್‌ಎಫ್.7 ಎಚ್ಚರ ವಹಿಸಬೇಕಾಗಿದೆ. ವಿದೇಶಗಳಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಮುಂಜಾಗ್ರತಾ ಕ್ರಮಗಳೊಂದಿಗೆ ಪ್ರಯಾಣ ಬೆಳೆಸುವಂತೆ ಸೂಚಿಸಲಾಗಿದೆ. ಅಷ್ಟೇ ಅಲ್ಲದೇ, ಯಾವುದೇ ಪ್ರಯಾಣದ ಹಿನ್ನೆಲೆ ಇಲ್ಲದ ಸ್ಥಳೀಯರಲ್ಲೂ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ. ಸದ್ಯ ಸೋಂಕಿಗೆ ಒಳಗಾದವರಲ್ಲಿ ಬಹುಪಾಲು ಮಂದಿ ಯಾವುದೇ ಅಂತರರಾಜ್ಯ, ಅಂತರರಾಷ್ಟ್ರೀಯ ಪ್ರಯಾಣದ ಹಿನ್ನೆಲೆ ಹೊಂದಿಲ್ಲ. ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಆರೋಗ್ಯ ಅಧಿಕಾರಿಗಳು ಸೋಂಕು ತಡೆಗಟ್ಟುವ ಕ್ರಮಗಳನ್ನು ಶಿಫಾರಸು ಮಾಡಿದ್ದಾರೆ.
ವ್ಯಾಕ್ಸಿನೇಷನ್: ತೀವ್ರ ಅನಾರೋಗ್ಯದ ಅಪಾಯವನ್ನು ಕಡಿಮೆ ಮಾಡಲು, ಯಾವುದೇ ಶಿಫಾರಸು ಮಾಡಲಾದ ಬೂಸ್ಟರ್‌ಗಳನ್ನು ಒಳಗೊಂಡಂತೆ ಲಸಿಕೆಗಳು ಹಾಕಿಸಿಕೊಳ್ಳಿ.
ಮಾಸ್ಕ್ ಧರಿಸುವುದು: ಜನದಟ್ಟಣೆ ಅಥವಾ ಸುತ್ತುವರಿದ ಸ್ಥಳಗಳಲ್ಲಿ, ಮಾಸ್ಕ್ ಧರಿಸುವುದರಿಂದ ವೈರಸ್ ಹರಡುವಿಕೆಯನ್ನು ಕಡಿಮೆ ಮಾಡಬಹುದು.
ಕೈ ನೈರ್ಮಲ್ಯ: ಸೋಂಕಿನ ಅಪಾಯವನ್ನು ಕಡಿಮೆ ಮಾಡಲು ನಿಯಮಿತವಾಗಿ ಸೋಪ್ ಮತ್ತು ನೀರಿನಿಂದ ಕೈ ತೊಳೆಯಿರಿ ಅಥವಾ ಹ್ಯಾಂಡ್ ಸ್ಯಾನಿಟೈಸರ್‌ಗಳನ್ನು ಬಳಸಿ.
ರೋಗಲಕ್ಷಣಗಳನ್ನು ಮೇಲ್ವಿಚಾರಣೆ ಮಾಡುವುದು: ಮೇಲೆ ತಿಳಿಸಲಾದ ಯಾವುದೇ ಲಕ್ಷಣಗಳ ಬಗ್ಗೆ ಜಾಗರೂಕರಾಗಿರಿ. ಅವು ಕಾಣಿಸಿಕೊಂಡರೆ ವೈದ್ಯಕೀಯ ಚಿಕಿತ್ಸೆ ಪಡೆಯಿರಿ.
ಐಸೋಲೇಷನ್: ರೋಗಲಕ್ಷಣಗಳನ್ನು ಅನುಭವಿಸುತ್ತಿರುವ ವ್ಯಕ್ತಿಗಳು ಇತರರಿಗೆ ವೈರಸ್ ಹರಡುವುದನ್ನು ತಡೆಯಲು ಸ್ವಯಂ-ಪ್ರತ್ಯೇಕವಾಗಿರಬೇಕು.
ಆಪಾಯಕಾರಿಯೇ?
ಓಮಿಕ್ರಾನ್ ರೂಪಾಂತರದ ಉಪ-ವಂಶಾವಳಿಯೂ ಆಗಿದ್ದು, ಮಾರಕವಾಗಿಲ್ಲ. ಹಿಂದಿನ ತಳಿಗಳಿಗಿಂತ ಹೆಚ್ಚು ತೀವ್ರವಾದ ಅನಾರೋಗ್ಯವನ್ನು ಉಂಟುಮಾಡುತ್ತದೆ ಎಂಬುದಕ್ಕೆ ಯಾವುದೇ ಸೂಚನೆಗಳಿಲ್ಲ. ಆದರೆ, ಇದು ಹೆಚ್ಚು ಸಾಂಕ್ರಾಮಿಕವಾಗಬಹುದು. ಆದ್ದರಿಂದ ಬಹುಬೇಗ ಹರಡುತ್ತವೆ.
ಸೋಂಕುಗಳು ಮೊದಲು ಕಂಡುಬಂದಿದ್ದೆಲ್ಲಿ?
ಕೋವಿಡ್ ಹೊಸ ಉಪತಳಿಗಳು ಚೀನಾದ ಹಾಂಕಾಂಗ್ ಮತ್ತು ಸಿಂಗಾಪುರದಲ್ಲಿ ಮೊದಲು ಕಾಣಿಸಿಕೊಂಡವು.
ಭಾರತದಲ್ಲಿ ಕಂಡುಬಂದಿದ್ದೆಲ್ಲಿ?
ಎನ್‌ಬಿ.1.8.1 ಸೋಂಕು ಏಪ್ರಿಲ್‌ನಲ್ಲಿ ತಮಿಳಿನಾಡಿನಲ್ಲಿ ಮೊದಲು ಕಾಣಿಸಿಕೊಂಡಿತು. ಎಲ್‌ಎಫ್.7 ಸೋಂಕು ಮೇ ತಿಂಗಳಲ್ಲಿ ಗುಜರಾತ್‌ನಲ್ಲಿ ದೃಢಪಟ್ಟಿತು.
ಹೊಸ ತಳಿಗಳು ಕೇರಳ, ಮಹಾರಾಷ್ಟ್ರ, ಕರ್ನಾಟಕ, ದೆಹಲಿ ಮತ್ತು ಹಲವಾರು ಈಶಾನ್ಯ ರಾಜ್ಯಗಳಲ್ಲಿ ವರದಿಯಾಗಿವೆ. ಕೇರಳದಲ್ಲಿ ಪ್ರಸ್ತುತ ಅತಿ ಹೆಚ್ಚು ಪ್ರಕರಣಗಳಿವೆ. ನಂತರ ತಮಿಳುನಾಡು ಮತ್ತು ಮಹಾರಾಷ್ಟ್ರ ಇವೆ. ಮೇ 27ರ ವರದಿ ಪ್ರಕಾರ, ಭಾರತದಲ್ಲಿ ಕೋವಿಡ್ ಸೋಂಕುಗಳ ಸಂಖ್ಯೆ 1010ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ ಪ್ರಕರಣಗಳ ಸಂಖ್ಯೆ 430 ಕ್ಕೇರಿದೆ.
2025ರಲ್ಲಿ ಕರ್ನಾಟಕದಲ್ಲೇ ಮೊದಲ ಬಲಿ
ಈ ವರ್ಷದಲ್ಲಿ ಕೊರೊನಾ ಸೋಂಕಿಗೆ ಕರ್ನಾಟಕದಲ್ಲಿ ಮೊದಲ ಬಲಿಯಾಗಿದೆ. ಕೆಲ ದಿನಗಳ ಹಿಂದಷ್ಟೇ 85 ವರ್ಷದ ವೃದ್ಧರೊಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ. ಇವರಿಗೆ ಇತರೆ ಅನಾರೋಗ್ಯ ಸಮಸ್ಯೆಗಳು ಕೂಡ ಇದ್ದವು ಎಂದು ತಿಳಿದುಬಂದಿದೆ. ದೇಶದಲ್ಲಿ ಒಟ್ಟು ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 80ಕ್ಕೆ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ 73, ಬೆಂಗಳೂರು ಗ್ರಾಮಾಂತರ 2, ಮೈಸೂರು 3, ವಿಜಯನಗರ ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.