ಮಂಗಳೂರು: ಸಿಎಂ ಸಿದ್ದರಾಮಯ್ಯ ಮೀನಿನ ಖಾದ್ಯ ತಿಂದು ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿರುವುದು ಭಾರೀ ವಿವಾದಕ್ಕೆ ಕಾರಣವಾಗಿದ್ದು, ಈ ಕುರಿತು ಆಸ್ತಿಕ ವಲಯದಲ್ಲಿ ಭಾರೀ ಚರ್ಚೆಗಳು ಆರಂಭವಾಗಿದೆ.
ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸದಲ್ಲಿದ್ದ ಸಿಎಂ ಸಿದ್ದರಾಮಯ್ಯ ಮಧ್ಯಾಹ್ನದ ವೇಳೆಗೆ ಬಂಟ್ವಾಳದಲ್ಲಿ ಕಾರ್ಯಕ್ರಮ ಮುಗಿಸಿ, ಬಂಟ್ವಾಳ ಐಬಿಯಲ್ಲಿ ಕರಾವಳಿ ಖಾದ್ಯ ಮೀನನ್ನು ಸೇವಿಸಿದ್ದರು. ಆ ಬಳಿಕ ಸಿಎಂ ನೇರವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಹೋಗಿ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದರು.
Advertisement
ಸಿಎಂ ಸಿದ್ದರಾಮಯ್ಯ ಅವರ ಜೊತೆ ಸಚಿವರಾದ ರಮಾನಾಥ ರೈ, ಯು.ಟಿ.ಖಾದರ್ ಅವರು ಮಂಜುನಾಥನ ದರ್ಶನ ಪಡೆದಿದ್ದರು. ಪುಣ್ಯ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರು ಮಾಂಸಹಾರವನ್ನು ಸೇವಿಸದೇ ಮಂಜುನಾಥ ಸ್ವಾಮಿಯ ದರ್ಶನ ಪಡೆಯುತ್ತಾರೆ. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ಇದೀಗ ಮೀನು ಮಾಂಸ ಸೇವಿಸಿ ದರ್ಶನ ಪಡೆದಿರುವುದು ಭಾರೀ ವಿವಾದಕ್ಕೆ ಕಾರಣವಾಗಿದೆ.