ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ – MUDA) ವಿಚಾರದಲ್ಲಿ ಮೈಸೂರು ಸುದ್ದಿ ಆಗುತ್ತಿರುವ ಹೊತ್ತಿನಲ್ಲಿ ಮತ್ತೆ ಹೊಸ ವಿವಾದ ಆರಂಭವಾಗಿದೆ. ಆ ವಿವಾದದ ಕೇಂದ್ರ ಬಿಂದು ಚಾಮುಂಡಿ ಬೆಟ್ಟ.
ಮೈಸೂರಿನ ಚಾಮುಂಡಿ ಬೆಟ್ಟದ (Mysuru Chamundi Hills) ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಚಾಮುಂಡಿ ಬೆಟ್ಟ ಅಭಿವೃದ್ಧಿ ಪ್ರಾಧಿಕಾರ ರಚನೆ ಮಾಡಿತ್ತು. ಆದರೆ, ಈ ವಿಚಾರದಲ್ಲಿ ಮೈಸೂರಿನ ರಾಜಮನೆತನ ನ್ಯಾಯಾಲಯದ ಮೆಟ್ಟಿಲು ಏರಿ ಪ್ರಾಧಿಕಾರದ ರಚನೆಗೆ ತಡೆಯಾಜ್ಞೆ ತಂದಿದೆ. ಈ ಮೂಲಕ ಸರ್ಕಾರ ಮತ್ತು ಮೈಸೂರು ರಾಜಮನೆತನದ ನಡುವೆ ಜಟಾಜಟಿ ಶುರುವಾಗಿದೆ. ಈ ಹಿಂದೆಯೂ ಅರಮನೆ ಆಸ್ತಿ ವಿಚಾರದಲ್ಲೂ ಇದೇ ರೀತಿಯ ಜಟಾಪಟಿ ಸರ್ಕಾರ ಮತ್ತು ರಾಜಮನೆತನದ ನಡುವೆ ನಡೆದಿತ್ತು. ಆಗ ಸಿದ್ದರಾಮಯ್ಯ ಉಪ ಮುಖ್ಯಮಂತ್ರಿಯಾಗಿದ್ದರು. ಈಗ ಮತ್ತೆ 2ನೇ ಸುತ್ತಿನ ಜಟಾಪಟಿ ಆರಂಭವಾಗಿದೆ.
ಈ ಬಗ್ಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದ ಪ್ರಮೋದಾ ದೇವಿ ಒಡೆಯರ್ (Pramoda Devi Wadiyar), ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಆಸ್ತಿ. ಅದು ಸಂಸ್ಥಾನದ ಖಾಸಗಿ ಆಸ್ತಿಗಳ ಪಟ್ಟಿಯಲ್ಲಿ ಇದೆ. ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ನಮ್ಮ ವಿರೋಧ ಇದೆ. ಸಂಸ್ಥಾನದ ಖಾಸಗಿ ಆಸ್ತಿಗಳ ಪಟ್ಟಿಯಲ್ಲಿ ಬೆಟ್ಟದ ಅರಮನೆ, ನಂದಿ, ಚಾಮುಂಡೇಶ್ವರಿ ಹಾಗೂ ಮಹಾಬಲೇಶ್ವರ ದೇವಸ್ಥಾನ, ದೇವಿಕೆರೆ ಸುತ್ತಮುತ್ತಲ ಪ್ರದೇಶ ಸೇರಿದೆ. ಪ್ರಕರಣ ಕೋರ್ಟ್‌ನಲ್ಲಿ ಇರುವಾಗ ಪ್ರಾಧಿಕಾರ ರಚನೆ ಮಾಡುವುದು ಸರಿಯಲ್ಲ. ಹೀಗಾಗಿ ಕೋರ್ಟ್‌ನಲ್ಲಿ ಪ್ರಶ್ನೆ ಮಾಡಲಾಗಿದೆ ಎಂದು ಹೇಳಿದ್ದಾರೆ.
ಇದಕ್ಕೆ ಸಿಎಂ ಮತ್ತು ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯೆ ನೀಡಿದ್ದು, ಯಾವ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರ್ತಾರೋ ಅಂಥಹ ದೇವಸ್ಥಾನಗಳಲ್ಲಿ ಪ್ರಾಧಿಕಾರ ಮಾಡಿದ್ದೇವೆ. ಪ್ರತಿವರ್ಷ ಚಾಮುಂಡಿ ದೇವಾಲಯಕ್ಕೆ ಕನಿಷ್ಟ 50 ಲಕ್ಷ ಜನ ಬರ್ತಾರೆ. ಮೂಲ ಸೌಕರ್ಯಗಳನ್ನು ಒದಗಿಸಲು, ಅಭಿವೃದ್ಧಿಯ ದೃಷ್ಟಿಯಿಂದ ಪ್ರಾಧಿಕಾರ ಮಾಡಿದ್ದೇವೆ. ಕೋರ್ಟ್‌ನಲ್ಲಿ ಕೇಸಿದೆ. ಏನು ತೀರ್ಮಾನ ಆಗುತ್ತೋ ಅದರ ಪ್ರಕಾರ ನಡೆದುಕೊಳ್ಳತ್ತೇವೆ ಎಂದಿದ್ದಾರೆ.
ಇನ್ನೂ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿ ನಾವು ಕಾನೂನು ಮಾಡಿದ್ದೇವೆ. ಪ್ರಮೋದಾ ದೇವಿಯವರು ಕೋರ್ಟ್‌ಗೆ ಹೋಗಿ ತಡೆಯಾಜ್ಞೆ ತಂದಿದ್ದಾರೆ. ಕಾನೂನು ತಜ್ಞರ ಜೊತೆ ಚರ್ಚೆ ಮಾಡಿ ಏನ್ ಮಾಡಬೇಕು ಅಂತ ಮುಂದಿನ ತೀರ್ಮಾನ ಮಾಡ್ತೀವಿ ಎಂದಿದ್ದಾರೆ. ಒಟ್ಟಾರೆ ಈಗ ಮೈಸೂರಿನಲ್ಲಿ ಹೊಸ ವಿವಾದದ ಚರ್ಚೆ ಜೋರಾಗಿದೆ. ಈ ವಿವಾದಕ್ಕೆ ನ್ಯಾಯಾಲಯದ ಆದೇಶದಿಂದ ಮಾತ್ರವೇ ತೆರೆ ಎಳೆಯಬಹುದಾಗಿದೆ.