– ಮೂರು ದಿನಗಳ ಬಳಿಕ ತೇಲಿ ಬಂದ ಮೃತ ದೇಹ
ಯಾದಗಿರಿ: ಕೃಷ್ಣಾ ನದಿಯ ಪ್ರವಾಹಕ್ಕೆ ಕೃಷ್ಣಾ ಹೈಡ್ರೋಪವರ್ ವತಿಯಿಂದ ನಿರ್ಮಿಸಲಾಗಿದ್ದ ಸೇತುವೆ ಕೊಚ್ಚಿ ಹೋಗಿದೆ.
ಸುರಪುರ ತಾಲೂಕಿನ ಬೆಂಚಿಗಡ್ಡಿ ಗ್ರಾಮದ ಬಳಿ ಕೃಷ್ಣಾ ನದಿಗೆ ಅಡ್ಡಲಾಗಿ ಈ ಸೇತುವೆಯನ್ನು ನಿರ್ಮಾಣ ಮಾಡಿ ಕಳೆದ ವರ್ಷವಷ್ಟೇ ಉದ್ಘಾಟನೆ ಮಾಡಲಾಗಿತ್ತು. ಪಿಡಬ್ಲೂಡಿ ಇಲಾಖೆ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣವಾಗಿದ್ದ ಸೇತುವೆಯನ್ನು ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿತ್ತು. ಸದ್ಯ ಕೃಷ್ಣಾ ನದಿಯಿಂದ 5.60 ಲಕ್ಷ ಕ್ಯೂಸೆಕ್ ನೀರು ನದಿಗೆ ಹರಿಸಲಾಗುತ್ತಿದೆ. ಸೇತುವೆ ಕೊಚ್ಚಿ ಹೋಗಿರುವುದರಿಂದ ನೀಲಕಂಠರಾಯನ ಗಡ್ಡಿಗೆ ಸಂಪರ್ಕ ಕಡಿತವಾಗಿದ್ದು, ನಡುಗಡ್ಡೆಯಾಗಿ ಪರಿರ್ತನೆಯಾಗಿದೆ.
Advertisement
Advertisement
ಪ್ರತಿವರ್ಷವೂ ಮಳೆಯ ಸಂದರ್ಭದಲ್ಲಿ ನಡುಗಡ್ಡೆಯಾಗಿ ಪರಿವರ್ತನೆಯಾಗುತ್ತಿದ್ದ ನೀಲಕಂಠರಾಯನ ಗಡ್ಡಿ ಗ್ರಾಮಕ್ಕೆ ಸೇತುವೆ ನಿರ್ಮಾಣ ಮಾಡಿದ್ದರಿಂದ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದರು. ಆದರೆ ಅವರ ಸಂತಸ ಬಹುಬೇಗ ಮಾಯವಾಗಿದೆ. ನದಿಯಲ್ಲಿ ಕ್ಷಣ ಕ್ಷಣಕ್ಕೂ ನೀರಿನ ಪ್ರಮಾಣ ಹೆಚ್ಚಳವಾಗಿರುವುದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪ್ರತಿವರ್ಷ ಸಮಸ್ಯೆ ಎದುರಾಗುತ್ತಿರುವುದನ್ನು ತಿಳಿದಿದ್ದ ಜಿಲ್ಲಾಡಳಿತ ಮುನ್ನೆಚ್ಚರಿಕೆ ವಹಿಸಿ ಈ ಬಾರಿ ಕಳೆದ 2 ದಿನಗಳ ಹಿಂದೆಯಷ್ಟೇ ಗ್ರಾಮಸ್ಥರಿಗೆ ಆಹಾರ ಪೂರೈಕೆ ಮಾಡಿತ್ತು. ಸದ್ಯ ನೀರಿನ ಪ್ರಮಾಣ ಕಡಿಮೆ ಆಗಲು ಸರಿಸುಮಾರು 1 ತಿಂಗಳು ಅವಧಿ ಬೇಕಾಗುತ್ತದೆ ಎಂಬ ಮಾಹಿತಿ ಲಭಿಸಿದ್ದು, ಮುಂದಿನ ಅವಧಿಯಲ್ಲಿ ಗ್ರಾಮಸ್ಥರನ್ನು ಸಂಪರ್ಕ ಮಾಡುವ ಕಾರ್ಯವನ್ನು ಜಿಲ್ಲಾಡಳಿತ ಮಾಡಬೇಕಿದೆ.
Advertisement
ತೇಲಿ ಬಂದ ಮೃತ ದೇಹ: ಕಳೆದ ಮೂರು ದಿನಗಳ ಹಿಂದೆ ಪಂಪ್ ಸೆಟ್ ತರಲು ಹೋಗಿ ಭೀಮಾ ನದಿಯಲ್ಲಿ ಕೊಚ್ಚಿ ಹೋಗಿದ್ದ ರೈತನ ಮೃತ ದೇಹ ನದಿಯಲ್ಲಿ ತೇಲಿ ಬಂದಿದೆ. ಯಾದಗಿರಿ ತಾಲೂಕಿನ ಕೋಳೂರು ಗ್ರಾಮದ ಸಾಹೇಬರೆಡ್ಡಿ ಮೃತ ರೈತರಾಗಿದ್ದು. ಮೂರು ದಿನಗಳ ಹಿಂದೆ ಭೀಮಾನದಿಯಲ್ಲಿ ಕೊಚ್ಚಿ ಹೋಗಿದ್ದರು. ಎರಡು ದಿನಗಳು ನಿರಂತರ ಶೋಧ ಕಾರ್ಯ ನಡೆಸಿದರು ಅವರ ಮೃತ ದೇಹ ಪತ್ತೆಯಾಗಿರಲಿಲ್ಲ. ಆದರೆ ಇಂದು ಬೆಳಗ್ಗೆ ನದಿಯಲ್ಲಿ ಮೃತ ದೇಹ ತೇಲಿ ಬಂದಿದೆ.